ಮಂಗಳವಾರ, ನವೆಂಬರ್ 15, 2011

ನೆನಪುಗಳ ಮಾತು ಮಧುರ -- ೯(ಕಳೆದ ಭಾಗದಲ್ಲಿ: ರಿಚರ್ಡ್ ಲೂಯಿಸ್ ಎಂಬ ಸಂತ ಫಿಲೋಮಿನಾ ಚರ್ಚಿನ ಪಾದ್ರಿಯು ಅದೇ ಚರ್ಚಿನ ಕಂಫೆಶನ್ ಬೂಥ್-ನಲ್ಲಿ ಕುಳಿತು ಅವಳ ಮುಂದೆ ತನ್ನ ಅಪರಾಧಗಳನ್ನು ಒಪ್ಪಿಕೊಳ್ಳುತ್ತಾನೆ. ಅವಳಿಗೆ ರೇ ರಾಟ್ವೈಲರ್-ನ ಪ್ರಸ್ತುತ ವಿಳಾಸವನ್ನು ತಿಳಿಸುತ್ತಾನೆ. ತದನಂತರ, ಫಾದರ್ ರಿಚರ್ಡ್ ಲೂಯಿಸ್-ಅನ್ನು ಸಂತ ಫಿಲೋಮಿನಾ ಚರ್ಚಿನ ಪ್ರಾರ್ಥನಾ ಗೃಹದಲ್ಲಿ ಶಿಲುಬೆಯೊಂದರ ಮೇಲೆ ಮೊಳೆ ಹೊಡೆದು ಆಹುತಿ ನೀಡುತ್ತಾಳೆ. ರಾಟ್ವೈಲರ್-ಅನ್ನು ಹುಡುಕಿಕೊಂಡು ಹೋಗುತ್ತಾಳೆ.)

ಮೈಸೂರಿನ ಆಧುನಿಕ ಇತಿಹಾಸದಲ್ಲಿ ಅರಮನೆಯಷ್ಟೇ ಪ್ರಾಮುಖ್ಯತೆ ಹೊಂದಿದ್ದ ಸ್ಥಳ 'ಫಲಾಮೃತ'. ಐಸ್-ಕ್ರೀಂ ಮುಂತಾದ ತಂಪು ಖಾದ್ಯ-ಪೇಯಗಳನ್ನು ಬಿಕರಿ ಮಾಡಿ ಹೆಸರು ಗಳಿಸಿದ ಈ ಪ್ರಾಚೀನ ಅಂಗಡಿ, ಮೈಸೂರಿನ ಅಭಿವೃದ್ಧಿಯ ನಂತರ ಕೊಂಚ ಬದಲಾಯಿತು. ಲ್ಯಾನ್ಸ್-ಡೌನ್ ಕಟ್ಟಡದಲ್ಲಿದ್ದ ಈ ಅಂಗಡಿಗೆ ಕುಟುಂಬ ಸಮೇತವಾಗಿ ಬರುತ್ತಿದ್ದವರೆಲ್ಲ ಬರುವುದು ನಿಲ್ಲಿಸಿದರು. ಕಾರಣ, ಲ್ಯಾನ್ಸ್-ಡೌನ್ ಕಟ್ಟಡ 'ನಿಶಿಕ್ರಿಯೆ'ಗಳ ಆಗರವಾಗಿತ್ತು ಎಂಬ ಪ್ರಚಾರ. ಬೆಂಗಳೂರಿನಲ್ಲಿ ಮಹಾತ್ಮ ಗಾಂಧಿ ರಸ್ತೆ ಡಿಕೆನ್ಸನ್ ರಸ್ತೆಯನ್ನು ಸೇರುವ ಸ್ಥಳ ಹೇಗೆ ಇದೇ ರೀತಿಯಲ್ಲಿ ಪ್ರಸಿದ್ಧಿ ಹೊಂದಿತ್ತೋ, ಹಾಗೆಯೇ ಲ್ಯಾನ್ಸ್-ಡೌನ್ ಕಟ್ಟಡವೂ ಕೂಡ. ಅಲ್ಲಿದ್ದ ಪುಸ್ತಕ ಮಳಿಗೆ, ಬಟ್ಟೆ ಅಂಗಡಿ, ಎಲ್ಲ ಕದ ಹಾಕಿಕೊಂಡವು. ಫಲಾಮೃತ ಮಾತ್ರ ಕೆಲ ದಿನಗಳ ಧೀರ ಹೋರಾಟ ನಡೆಸಿತು; ನಂತರ ವಿಧಿನಿಯಮಕ್ಕೆ ಬಾಗಿ ಅದೂ ಕೂಡ ಬಾಗಿಲು ಹಾಕಿತು. ಲ್ಯಾನ್ಸ್-ಡೌನ್ ಕಟ್ಟಡದ ಮಾಲೀಕರು (ಸರ್ಕಾರ ಆ ಐತಿಹಾಸಿಕ ಕಟ್ಟಡವನ್ನು ಎಂದೋ ಖಾಸಗಿ ಕಂಪನಿಗೆ ಮಾರಿತ್ತು) ಅದನ್ನು ಯಾರೋ ಆಂಧ್ರದವರಿಗೆ ಮಾರಿದ್ದರು. ನಂತರ, ಆ ಆಂಧ್ರಪುತ್ರರು ಅದನ್ನು ರಾಜಾಸ್ಥಾನಿಗಳಿಗೆ ಮಾರಿ, ಆ ಮಹಾನುಭಾವರು ಅದನ್ನು ದುಬೈ ಒಡೆಯರಿಗೆ ಮಾರಿ, ಅವರು ಕೊನೆಗೆ ಅದನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮಾರಿದ್ದರು. ಹೀಗೆ ಪ್ರದಕ್ಷಿಣೆ ಮುಗಿಸಿ ಬಂದ ಕಟ್ಟಡವನ್ನು ವ್ಯಾಪಾರ ವಲಯಕ್ಕೋಸ್ಕರ ಸಿದ್ಧಪಡಿಸಬೇಕು ಎಂದು ಪ್ರಾಧಿಕಾರ ಆದೇಶ ಹೊರಡಿಸಿತು. ಆ ಸ್ಥಳವನ್ನು ಹೊರದೇಶದ ಕಂಪನಿಗಳಿಗೆ ಹೆಚ್ಚಿನ ಬೆಲೆಗೆ ಮಾರುವುದೆಂದು ನಿಶ್ಚಯಿಸಿದ ಪ್ರಾಧಿಕಾರ ಕಟ್ಟಡವನ್ನು ಹರಾಜು ಹಾಕಿತು. ಆ ಹರಾಜಿನಲ್ಲಿ ಗೆದ್ದು ಲ್ಯಾನ್ಸ್-ಡೌನ್ ಕಟ್ಟಡವನ್ನು ಕೊಂಡ ಕಂಪನಿ 'ಎಫೆಮೆರಾ' ಎಂಬ ಸಂಸ್ಥೆ.

ಎಫೆಮೆರಾ ಆ ಕಟ್ಟಡದಲ್ಲಿ ಕೆಲವು ಲ್ಯಾಬ್-ಗಳನ್ನು ಸ್ಥಾಪಿಸಿ, ಅಲ್ಲಿ ತನ್ನ ಅತ್ಯಾಧುನಿಕ ಸಂಶೋಧನೆಗಳನ್ನು ನಡೆಸಿತು. ಅಂತಹ ಸಂಶೋಧನೆಗಳನ್ನು ಮಾಡಿದ ವಿಜ್ಞಾನಿಗಳಲ್ಲಿ ಹೆಸರುವಾಸಿಯಾದವನು ರೇ ರಾಟ್ವೈಲರ್ ಎಂಬಾತ. ಹೇಳದೆ-ಕೇಳದೆ ಅಪರಾಧಿಗಳ ಮೇಲೆ ಸಂಶೋಧನೆ ನಡೆಸಿ ನ್ಯಾಯಾಲಯಗಳ ಕ್ರೋಧಕ್ಕೆ ಗುರಿಯಾಗಿ ಲ್ಯಾಬ್-ಗಳನ್ನು ಮುಚ್ಚಬೇಕಾಗಿ ಬಂದಿತು; ಆದರೆ ರಾಟ್ವೈಲರ್ ಅಷ್ಟು ಸುಲಭವಾಗಿ ಸೋಲೊಪ್ಪುವ ವ್ಯಕ್ತಿಯಾಗಿರಲಿಲ್ಲ. ತನ್ನ ಸಂಶೋಧನೆಯನ್ನೆಲ್ಲ ನಿಲ್ಲಿಸಬೇಕು ಎಂದು ನ್ಯಾಯಾಲಯ ಆದೇಶ ಹೊರಡಿಸಿದ ತಕ್ಷಣವೇ ಅದೇ ಕಟ್ಟಡದ ಅಡಿಯಲ್ಲಿ ಗುಪ್ತ ಲ್ಯಾಬ್ ಒಂದನ್ನು ಕಟ್ಟಿಸಿದ. ಅಲ್ಲಿಗೆ ಹೋಗುವ ರಹಸ್ಯ ಮಾರ್ಗ ಅವನಿಗೆ, ಅವನ ಗೆಳೆಯರೊಂದಿಬ್ಬರಿಗೆ ಮಾತ್ರ ಗೊತ್ತಿತ್ತು. ಆ ಗುಪ್ತ ಪ್ರಯೋಗಾಲಯಕ್ಕೆ ತನ್ನ ಎಲ್ಲ ಪ್ರಯೋಗಸಾಧನಗಳನ್ನು ಸಾಗಿಸಿದ; ಹಿಂದಿನ 'ಫಲಾಮೃತ'ದ ಕೆಳಗೆ ರಾಟ್ವೈಲರ್-ನ ಹೊಸ ಲ್ಯಾಬ್ ಪ್ರಾರಂಭವಾಯಿತು.

=====================================================================

" 'ದಾರಿ ತಪ್ಪಿದ ಮಗ' ಆದ್ಮೇಲೆ 'ಅದೇ ಕಣ್ಣು'. ಅಷ್ಟೇ, ಆಮೇಲೆ ಯಾವುದೂ ಇಲ್ಲ."
"ಹಾಗೆ ನೋಡಕ್ಕೆ ಹೋದ್ರೆ 'ಭಕ್ತ ಪ್ರಹ್ಲಾದ' ಕೂಡ ಅಷ್ಟೇ."
"ಅದು ಪುರಾಣದ ಕತೆ. ಈ ಕಾಲದ ಬಗ್ಗೆ ಹೇಳು."
"ಎರಡೇ-ನಾ?"
"ಸದ್ಯಕ್ಕೆ ಹೊಳೀತಿರೋದು ಅಷ್ಟೇ. ಇನ್ನೊಂದಿಷ್ಟು ಮಾಡಬೋದಿತ್ತು -- "
"ಬಂದ್ವಾ?"

ತಮ್ಮ ಚರ್ಚೆಯ ನಡುವೆ ಹೀಗೆ ಪ್ರಶ್ನೆ ಕೇಳಿದ ಅವಳನ್ನು ಅದ್ನಾನ್-ವೆಂಕಟ್ ನೋಡಿದರು.
"ಇನ್ನೇನು ಬಂದ್ವಿ. ಇಲ್ಲೇ ಮುಂದೆ ಹೋಗಿ ಬಲಗಡೆ. ಅನ್ಸತ್ತೆ."
"ಅನ್ಸತ್ತಾ?"
"ಹೂಂ, ಈ ಕಡೆ ಬಂದು ತುಂಬಾ ದಿನ ಆಯ್ತು. ಸ್ವಲ್ಪ ದಾರಿ ಗೊತ್ತಾಗ್ತಿಲ್ಲ --- ಇಲ್ಲೇ ಮುಂದೆ ಇದೆ, ಖಂಡಿತ."
"ನೀವು ಇದೇ ಊರಿನವರು, ಆಲ್ವಾ?"
"ಹೌದು-ಹೌದು, ಹುಟ್ಟಿದ್ದು, ಬೆಳೆದಿದ್ದು, ಎಲ್ಲ ಇಲ್ಲೇ....ಆಹ್, ಬಂದ್ವಿ."

'ಫಲಾಮೃತ' ಎಂಬ ತುಕ್ಕು ಹಿಡಿದ ಬೋರ್ಡು ಕಾಣಿಸಿಕೊಂಡಿತು. ಬಾಗಿಲಿಗೆ ಬೀಗ ಹಾಕಿದ್ದು, ಒಳಗೆ ಯಾರೂ ಇದ್ದಂತಿರಲಿಲ್ಲ. ಒಂದು ಕಿಟಕಿ ಸ್ವಲ್ಪ ತೆಗೆದು ಇಣುಕಿ ನೋಡಿದಾಗ 'ಫಲಾಮೃತ' ಹೊಂದಿದ್ದ ಅಧೋಗತಿ ಸ್ಪಷ್ಟವಾಯಿತು. ಹೇಗೆ ಒಳಗೆ ಹೋಗುವುದು ಎಂದು ಅದ್ನಾನ್ ಯೋಚಿಸುತ್ತಿರುವಾಗಲೇ ಅವಳು ಒಂದೇ ಒದೆತಕ್ಕೆ ಬೀಗವನ್ನು ಒಡೆದು ಬಾಗಿಲನ್ನು ತೆಗೆದಳು. ಮೂವರೂ ಒಳಹೊಕ್ಕು ಕಂಡದ್ದು ಜಡತನವೇ ಕೊಠಡಿಯ ರೂಪ ತಾಳಿ ಬಂದಂತಿದ್ದ ಸ್ಥಳವನ್ನು. ಅಲ್ಲಲ್ಲಿ ಜೇಡರ ಬಲೆಗಳು, ಧೂಳು, ಎಂದೋ ಬಿಸಾಡಿದ ದಿನಪತ್ರಿಕೆಗಳು, ಪುಸ್ತಕಗಳು, ಉಪಯೋಗಕ್ಕೆ ಬಾರದ ಯಂತ್ರಗಳು, ಎಲ್ಲ 'ಈ ಸ್ಥಳವನ್ನು ಎಂದೋ ಬಿಟ್ಟಾಯಿತು' ಎಂಬ ಸಂದೇಶವನ್ನು ಸಾರುತ್ತಿದ್ದವು. ಒಂದು ಗೋಡೆಯಲ್ಲಿ ಮೈಸೂರಿನ ಪ್ರಸಿದ್ಧ ನಾಗರಿಕರ ಚಿತ್ರಗಳು ನೇತಾಡುತ್ತಿದ್ದವು; ವಿಶ್ವೇಶ್ವರಯ್ಯ, ಆರ್. ಕೇ. ನಾರಾಯಣ್, ಮಿರ್ಜಾ ಇಸ್ಮಾಯಿಲ್, ಮತ್ತಿತ್ತರರು ಈ ಜರಾಜೀರ್ಣ ಕೋಣೆಯನ್ನು ಪರಿಶೀಲಿಸುತ್ತಿದ್ದರು. ಫಾದರ್ ರಿಚರ್ಡ್ ಲೂಯಿಸ್ ಬರೆದು ಕೊಟ್ಟ ಚೀಟಿಯನ್ನು ಒಮ್ಮೆ ನೋಡಿದ ಅವಳು, ಆ ಎಲ್ಲ ಚಿತ್ರಗಳನ್ನು ಕೆಳಗಿಳಿಸಿ ಗೋಡೆಯನ್ನು ಅಲ್ಲಲ್ಲಿ ತಟ್ಟಲಾರಂಭಿಸಿದಳು. ಒಂದು ಕಡೆ ಗೋಡೆ ಟೊಳ್ಳು ಎಂಬಂತೆ ಶಬ್ದವಾಯಿತು; ಆ ಸ್ಥಳವನ್ನು ಜೋರಾಗಿ ಒತ್ತಿದಳು. ತಕ್ಷಣವೇ ಆ ಗೋಡೆ ಒಂದು ಮೂಲೆಯಿಂದ ಸಿನಿಮಾ ತೆರೆಯ ಪರದೆಯಂತೆ ತೆರೆಯಲಾರಂಭಿಸಿತು. ಗೋಡೆಯ ಹಿಂದೆ ಗಣಿಗಳಲ್ಲಿ ಕಾಣಿಸಿಕೊಳ್ಳುವಂತಹ ಒಂದು ಸಣ್ಣ ಲಿಫ್ಟ್; ಮೂವರೋ ನಾಲ್ವರೋ ಹೋಗಲು ಮಾತ್ರ ಸ್ಥಳವಿತ್ತು ಅದರಲ್ಲಿ. ಅವಳು ಅದರಲ್ಲಿ ಹತ್ತಿದಳು, ಅದ್ನಾನ್-ವೆಂಕಟ್ ಅವಳನ್ನೇ ಹಿಂಬಾಲಿಸಿದರು. ಕಾಣಿಸಿಕೊಂಡ ಬಟನ್ನೊಂದನ್ನು ಒತ್ತಿದಾಗ ಲಿಫ್ಟ್ ಕೆಳಗಿಳಿಯಲಾರಂಭಿಸಿತು.

ಸುಮಾರು ನಲವತ್ತು ಸೆಕೆಂಡುಗಳ ಅಧೋಗಮನದ ನಂತರ ನಿಂತಿತು. ಒಂದು ಕ್ಷಣದ ಮೌನದ ನಂತರ ವೆಂಕಟ್ ಬಾಗಿಲನ್ನು ತೆಗೆದು ನೋಡಿದ. ಒಂದು ನೀಳವಾದ ಸುರಂಗದಂತಿದ್ದ ಪಥದ ಮುಂದೆ ಬಂದು ನಿಂತಿದ್ದರು. ಒಬ್ಬರು ಹೋಗುವಷ್ಟು ಮಾತ್ರ ಅಗಲವಿತ್ತು ಆ ಮಾರ್ಗ. ವೆಂಕಟ್ ಮುಂದೆ ನಡೆದ, ಅವನ ಹಿಂದೆಯೇ ಅದ್ನಾನ್ ಮತ್ತು ಅವಳು. ಸ್ವಲ್ಪ ಮುಂದೆ ನಡೆದು ಎಡಕ್ಕೆ ತಿರುಗಬೇಕಿತ್ತು. ವೆಂಕಟ್ ಎಡಕ್ಕೆ ನಡೆದ; ಮೊದಲನೆಯ ಗುಂಡು ತಗುಲಿದ್ದು ಅವನಿಗೆ.

ಸುರಂಗದಲ್ಲೆಲ್ಲ ಪ್ರತಿಧ್ವನಿಸಿತು ಪಿಸ್ತೂಲಿನ ಶಬ್ದ. ವೆಂಕಟ್-ಗೆ ಗುಂಡು ತಗುಲಿದ ತಕ್ಷಣವೇ ಅವನ ಹಿಂದಿದ್ದ ಅದ್ನಾನ್ ಮತ್ತು ಅವಳ ದಿಕ್ಕಿನಲ್ಲಿ ಮತ್ತಷ್ಟು ಗುಂಡುಗಳು ಹಾರಿದವು. ಅವಳಿಗೆ ಅಲ್ಲಿಂದ ಗುಂಡು ಹಾರಿಸುತ್ತಿರುವವರು ಯಾರು ಎಂಬುದು ಕಾಣಲಿಲ್ಲ. ಸುರಂಗದಲ್ಲಿದ್ದ ದೀಪ ಕಾಣಿಸಿತು. ಹಳೆಯ ಕಾಲದ 'ವಿದ್ಯುಚ್ಛಕ್ತಿ-ಉಳಿತಾಯ' ಬಲ್ಬು; ಅದನ್ನು ಆರಿಸಿದರೆ ಒಂದೆರಡು ಕ್ಷಣಗಳ ಬಿಡುವು ಸಿಕ್ಕು ಮತ್ತೆ ಲಿಫ್ಟಿಗೆ ಓಡಬಹುದು ಎಂದು ಯೋಚಿಸಿ ಕಾಲಡಿಯಲ್ಲಿದ್ದ ಕಲ್ಲೊಂದನ್ನು ಎತ್ತಿಕೊಂಡು ಆ ಬಲ್ಬಿನ ಕಡೆ ಎಸೆದಳು. ಗುರಿ ತಪ್ಪದೆ ಕಲ್ಲು ದೀಪವನ್ನು ಮುರಿಯಿತು. ಕತ್ತಲೆ.

ಆರಡಿಯ ಎತ್ತರದ ವೆಂಕಟ್-ನ ಮೃತದೇಹ ಕುಸಿದು ಅವಳ ಮುಂದೆ ಬಿದ್ದಿತ್ತು. ದೀಪವಾರಿದ ಕೂಡಲೇ ಒಂದೆರಡು ಕ್ಷಣ ಗುಂಡು ಹಾರುವುದೂ ನಿಂತಿತು; ಬಹುಶಃ ಪಿಸ್ತೂಲು ಹಿಡಿದವರಿಗೂ ಆಶ್ಚರ್ಯವಾಗಿತ್ತೇನೋ. ವೆಂಕಟ್-ನ ಶವವನ್ನು ಎತ್ತಿ ಹಿಡಿದು ಅವಳು ಮುಂದೆ ನಡೆದಳು; ಗುಂಡು ಹಾರಿದರೆ ನಿರ್ಜೀವವಾದ ಅವನಿಗೆ ತಗುಲಲಿ ಎಂದು. ಬಹಳ ಸಮೀಪದಲ್ಲೇ ಯಾರೋ ಯಾವುದಕ್ಕೋ ಕಾಲು ತಗುಲಿಸಿಕೊಂಡ ಶಬ್ದವಾಯಿತು. ಮತ್ತೊಂದೆರಡು ಗುಂಡುಗಳು ಹಾರಿದವು; ಒಂದು ಗುಂಡು ವೆಂಕಟ್-ನ ಮುಖಕ್ಕೆ ರಭಸದಿಂದ ಹೊಡೆದ ಶಬ್ದವಾಯಿತು. ಆ ಏಟಿಗೆ ರಕ್ತ ಕಾರಂಜಿಯಂತೆ ಅವನ ಮುಖದಿಂದ ಹಾರಿ ಅವಳ ಮೇಲೂ ಬಿತ್ತು. ಪಿಸ್ತೂಲು ಹಿಡಿದವರು ಬಹಳ ಹತ್ತಿರವೇ ಇರಬೇಕೆಂದು ಊಹಿಸಿ ವೆಂಕಟ್-ನ ಶವವನ್ನು ಆ ದಿಕ್ಕಿನಲ್ಲಿ ಜೋರಾಗಿ ನೂಕಿದಳು. ಒಂದರೆ ಕ್ಷಣದಲ್ಲಿ ಯಾರೋ ಕೂಗಿಕೊಂಡು ಪಿಸ್ತೂಲನ್ನು ಕೆಳಗೆ ಬೀಳಿಸಿದ ಶಬ್ದವಾಯಿತು. ಕಿಂಚಿತ್ತೂ ಯೋಚಿಸದೆ ಅವಳೂ ಅದೇ ದಿಕ್ಕಿನಲ್ಲಿ ಹಾರಿ ಆ ವ್ಯಕ್ತಿಯ ಮೇಲೆ ಬಿದ್ದಳು. ಅವರ ಕೈ-ಕಾಲು ವೆಂಕಟ್-ನ ಜೊತೆ  ಹೊಡೆದಾಡುತ್ತಿದ್ದವು; ಅತಿಶೀಘ್ರದಲ್ಲೇ ಆ ವ್ಯಕ್ತಿಯನ್ನು ಸದೆಬಡಿದಳು.

ಇಷ್ಟರಲ್ಲಿ ತನ್ನ ಫೋನಿನ ಬೆಳಕಿನಲ್ಲಿ ದಾರಿ ಹಿಡಿದು ಬಂದ ಅದ್ನಾನ್. ಆ ಬೆಳಕಿನಲ್ಲಿ ತಾನು ಹಿಡಿದಿದ್ದ ವ್ಯಕ್ತಿಯನ್ನು ನೋಡಿದಳು. ವಿದೇಶಿಯ ಬಿಳಿ-ಕೆಂಪು ಮೈಬಣ್ಣ, ಕೆಂಚು ಕೂದಲು. ಅದೇ ಸುರಂಗದ ಕೊನೆಯಲ್ಲಿ ಒಂದು ಕೋಣೆಯಿದ್ದಂತಿತ್ತು; ಲಿಫ್ಟಿನ ಶಬ್ದ ಕೇಳಿ ಅಲ್ಲಿಂದ ಇವನು ಬಂದಿರಬೇಕೆಂದು ಊಹಿಸಿದಳು. ಅವನನ್ನು ಎಳೆದುಕೊಂಡು ಕೋಣೆಗೆ ಹೋದರು, ಅವಳು ಮತ್ತು ಅದ್ನಾನ್. ಕುರ್ಚಿಯೊಂದಕ್ಕೆ ಅವನನ್ನು ಬಿಗಿಯಾಗಿ ಕಟ್ಟಿ ಅವನ ಮುಂದೆ ನಿಂತಳು. ರಕ್ತಸಿಂಚಿತವಾಗಿದ್ದ ಅವಳ ಮುಖ ಅವಳಿಗೆ ರಣಚಂಡಿಯ ಭಯಂಕರ ರೂಪ ತಂದಿತ್ತು.

"ರೇ ರಾಟ್ವೈಲರ್," ಅವನನ್ನು ಕುರಿತು ಹೇಳಿದಳು, "ನಾನು ಯಾರು, ಈಗ ಯಾಕೆ ಇಲ್ಲಿಗೆ ಬಂದೆ ಅನ್ನೋದು ಈಗಾಗಲೇ ನೀನು ಊಹಿಸಿರಬೋದು. 'ನಾನು ಹಾಗೆಲ್ಲ ಮಾಡಿಲ್ಲ! ನಂದೇನೂ ತಪ್ಪಿಲ್ಲ!' ಅಂತ ಸುಳ್ಳು ಹೇಳೋ ಅಷ್ಟು ನೀನು ದಡ್ಡ ಅಲ್ಲ. ನಾನು ತಿಳ್ಕೋಬೇಕಾಗಿರೋದು ಮೂರು ವಿಷಯಗಳು: ಬ್ರೇನ್ ಅಪ್ಲೋಡ್/ಡೌನ್-ಲೋಡ್ ಪ್ರಯೋಗ ಎಲ್ಲಿ ವರೆಗೂ ಬಂತು? ನನ್ನ ಮೇಲೆ ಪ್ರಯೋಗ ಮಾಡು ಅಂತ ನನ್ನನ್ನ ನಿನ್ನ ಕೈಗೆ ಒಪ್ಪಿಸಿದ್ದು ಯಾರು? ಅವರು ಈಗ ಎಲ್ಲಿದಾರೆ?"

ಅವನನ್ನು ಇಂಗ್ಲಿಷಿನಲ್ಲೇ ಪ್ರಶ್ನೆ ಕೇಳಿದಳು, ಅವನೂ ಒಂದು ಕ್ಷಣ ಅವಳನ್ನು ನೋಡಿ, ತನ್ನ ವಿಧಿಯನ್ನರಿತು, ಹಾಗೆಯೇ ಉತ್ತರಿಸಿದ.
"ನನ್ನ ಪ್ರಯೋಗ ಈಗ ಪರ್ಫೆಕ್ಟ್ ಆಗಿದೆ. ಯಾವ ಮೆದುಳಿಂದ ಯಾವುದಕ್ಕೆ ಬೇಕಾದ್ರೂ ಮಾಹಿತಿ ಅಪ್ಲೋಡ್/ಡೌನ್-ಲೋಡ್ ಮಾಡಬೋದು. ನಿನ್ನ ಮೇಲೆ ಪ್ರಯೋಗ ನಡೆಸಿದಾಗ ಇಷ್ಟು ಸಕ್ಸೆಸ್ ಕಂಡಿರಲಿಲ್ಲ ನಾವು. ಅದಕ್ಕೆ ನಿನ್ನ ಬ್ರೇನ್ ಕರಪ್ಟ್ ಆಗಿ ಪ್ರಯೋಗ ಅಲ್ಲಿಗೆ ಬಿಡಬೇಕಿತ್ತು. ಆ ಪಾದ್ರಿ ಕೈಲಿ ಕೊಟ್ಟು ಕಳಿಸಿದೆ ನಿನ್ನನ್ನ, ಎಲ್ಲಾದ್ರೂ ಬಿಟ್ಟು ಬಾ ಅಂತ. ಅವನು ಈ ನಿನ್ನ ಫ್ರೆಂಡ್ ಹತ್ರ" ಅದ್ನಾನ್-ನನ್ನು ತೋರಿಸಿ, "ಕರಕೊಂಡು ಹೋಗಿರಬೇಕು. ಇವನು ಸ್ವಲ್ಪ ಮಟ್ಟಿಗೆ ನಿನ್ನನ್ನ ರಿಪೇರಿ ಮಾಡಿದಾನೆ. ಇವನು ಪ್ರೋಗ್ರಾಮರ್ ಅಲ್ವೇ?"
"ಹೇಗೆ ಗೊತ್ತಾಯ್ತು?" ಅದ್ನಾನ್ ಆಶ್ಚರ್ಯದಿಂದ ಕೇಳಿದ. "ಮುಖದಲ್ಲಿ ಆ ಕಳೆ ಇದಿಯಾ?" ಅವನನ್ನು ಒಂದು ಕ್ಷಣ ನೋಡಿ, ಅದೊಂದು ಕೆಟ್ಟ ಜೋಕು ಎಂಬಂತೆ ನಿರಾಕರಿಸಿ ಮುಂದುವರೆದ ರಾಟ್ವೈಲರ್.
"ಅವತ್ತು ಬರೀ ಡೇಟಾ ಡಂಪ್ ಮಾತ್ರ ಆಗಿತ್ತು; ಡೇಟಾ ರಿಟ್ರೀವಲ್ ಸರಿಯಾಗಿ ಆಗ್ತಿರಲಿಲ್ಲ. ಆದ್ರೆ ನೀನು ಹೋದ ಮೇಲೆ ಇನ್ನೊಬ್ಬರ ಮೇಲೆ ಪ್ರಯೋಗ ನಡೆಸಿದೆ. ಕೊನೆಗೂ ನನ್ನ ತಪ್ಪು ಗೊತ್ತಾಗಿ ತಿದ್ದಿಕೊಂಡೆ. ಮೊನ್ನೆ ತಾನೇ ನನ್ನ ಟೆಕ್ನೀಕ್  ಸರಿಯಾಗಿ ಕೆಲಸ ಮಾಡ್ತು. ನಂಗೆ ಈಗ ಎಷ್ಟೊಂದು ಕಂಪನಿಗಳಿಂದ ಆಫರ್ ಬಂದಿದೆ, ಈ ಪ್ರಯೋಗದ ವಿಧಾನ ಅವರಿಗೆ ಮಾರೋದಕ್ಕೆ."
"ಮೊದಲನೇ ಪ್ರಶ್ನೆ ಆಯ್ತು. ಎರಡನೇದು?"

ರಾಟ್ವೈಲರ್ ಅವಳನ್ನೇ ನೋಡಿದ.
"ನಿಂಗೆ ನೆನಪೇ ಇಲ್ವಾ ಅವನು ಯಾರು ಅಂತ?"
ಅವಳು ಇಲ್ಲವೆಂದು ತಲೆಯಾಡಿಸಿದಳು.

"ಅವನ ಹೆಸರು ಅಮಿತ್ ಅಂತ. ಎಫೆಮೆರಾ ಕಂಪನಿ ಡೈರೆಕ್ಟರ್ಸಲ್ಲಿ ಒಬ್ಬ. ಸದಾ ಹೊಸ ಪ್ರಯೋಗ, ಹೊಸ ತಂತ್ರ, ವೈಜ್ಞಾನಿಕವಾಗಿ ಏನಾದ್ರೂ ಹೊಸಾದು ಬಂದಿದಿಯಾ ಅಂತ ಹುಡುಕೋ ಬುದ್ಧಿ. ವಿಜ್ಞಾನದ ಎಲ್ಲೆಗಳನ್ನ ಮೀರೋದು ಒಂದು ಆಸೆ; ಅದರಿಂದ ಲಾಭ ಪಡಕೊಳೋದು ಇನ್ನೊಂದು. ವಿಶ್ವದ ಎಲ್ಲ ಪ್ರಸಿದ್ಧ ಲ್ಯಾಬ್-ಗಳ ಜೊತೆ ಸಂಪರ್ಕ ಬೆಳೆಸಿದ್ದ, ಈ ಮಾಹಿತಿಗೋಸ್ಕರ. ಆನ್-ಲೈನ್ ಕೂಡ ಹುಡುಕಾಡ್ತಿದ್ದ, ಕೆಲವು 'ಭೂಗತ' ರಿಸರ್ಚ್ ಗ್ರೂಪ್-ಗಳಲ್ಲಿ. ಅಂಥಾ ಗ್ರೂಪ್-ನಲ್ಲೇ ನಾನು ಅವನು ಭೇಟಿಯಾಗಿದ್ದು. ನನ್ನ ರಿಸರ್ಚ್ ಬಗ್ಗೆ ಅವನಷ್ಟು ಯಾರೂ ಕುತೂಹಲ, ಆಸಕ್ತಿ ತೋರಿಸಿರಲಿಲ್ಲ. ಮೈಸೂರಿಗೆ ಬಂದ್ರೆ ಬೇಕಾದ ಸೌಲಭ್ಯ ಎಲ್ಲ ಮಾಡಿಕೊಡ್ತೀನಿ ಅಂದ. ಸರ್ಕಾರಕ್ಕೆ ಒಂದಿಷ್ಟು ದುಡ್ಡು ತಿನ್ಸಿದ್ರೆ ಎಲ್ಲಾ ನಡಿಯತ್ತೆ ನಮ್ಮೂರಲ್ಲಿ, ಮಾನವ ಹಕ್ಕು ಇಲ್ಲ, ಎಂಥದ್ದೂ ಇಲ್ಲ ಅಂತಲೂ ಅಂದ. ಅವನ ಮಾತಿನ ಮೇಲೆ ಇಲ್ಲಿಗೆ ಬಂದು ಪ್ರಯೋಗ ಆರಂಭ ಮಾಡಿದೆ.

ಸರ್ಕಾರ ನಮಗೆ ಕೈದಿಗಳನ್ನ ಕೊಡೋದು ನಿಲ್ಲಿಸಿದ ಮೇಲೆ ಕಷ್ಟ ಶುರು ಆಯ್ತು. ನನ್ನ, ಅಮಿತ್-ನ ಹಿಂದೆ ಪೊಲೀಸರು ಬಿದ್ದರು. ಆವರ ಕಣ್ಣಿಂದ ತಪ್ಪಿಸಿಕೊಳ್ಳೋದು, ಪ್ರಯೋಗದಲ್ಲಿ ತಪ್ಪೇನಿತ್ತು ಅಂತ ಗಿನೀ-ಪಿಗ್ ಇಲ್ಲದೆ ಬರೀ ಥಿಯರಿಯಲ್ಲಿ ಕಂಡುಹಿಡಿಯಕ್ಕೆ ಪ್ರಯತ್ನ ಪಡೋದು, ಕ್ರಮೇಣ ದುಡ್ಡಿನ ಕೊರತೆ, ನನ್ನ ಮೇಲೆ ತುಂಬ ಪ್ರೆಶರ್ ಇತ್ತು. ಮಾನಸಿಕವಾಗಿ ಅಸ್ವಸ್ಥ ಆಗ್ತಾ ಬಂದೆ. ಈ ಪ್ರಯೋಗ ಬೇಗ ಸಕ್ಸೆಸ್ಸಾಗಲಿಲ್ಲ ಅಂದ್ರೆ ನಾನು ನಿರ್ನಾಮವಾಗೋದು ಖಂಡಿತ ಅಂತ ಗೊತ್ತಿತ್ತು. ಅಮಿತ್ ಎಷ್ಟು ದಿನ ಅಂತ ನಂಗೆ ಬೆಂಬಲ ಕೊಡ್ತಿದ್ದ? ಹಾಗಂತ ಅವನು ಕೂಡ ಒಂದು ದಿನ ಬಂದು ಹೇಳಿದ. ಆಗಲೇ ನಾನು ಅವನನ್ನ ಬ್ಲಾಕ್-ಮೇಲ್ ಮಾಡಕ್ಕೆ ಶುರು ಮಾಡಿದ್ದು.

ಸರ್ಕಾರದಲ್ಲಿ ಯಾರಿಗೋ ನಮ್ಮ ಬಗ್ಗೆ ಗೊತ್ತಾಗಿದೆ ಅನ್ನೋ ಥರ ಮಾಡಿದೆ. ನಾನೇ ಖುದ್ದಾಗಿ ಅವನನ್ನ ಬೆದರಿಸೋ ಬದಲು, ಇಬ್ಬರೂ ಒಂದೇ ಪಕ್ಷ, ಇಬ್ಬರಿಗೂ ಒಬ್ಬ ಕಾಮನ್ ಶತ್ರು ಇದಾನೆ ಅನ್ನೋ ಥರ ಮಾಡೋದು ನಂಗೆ ಒಳ್ಳೇದು ಅನ್ನಿಸ್ತು. ಗೂಢಚಾರಿ ಎಜನ್ಸಿಯವರು ಅನ್ನೋ ಥರ ಅಮಿತ್-ಗೆ ಈ-ಮೇಲ್ ಕಳಿಸಿದೆ, 'ನಮಗೂ ನಿಮ್ಮ ಈ ರಹಸ್ಯ ಪ್ರಯೋಗದಲ್ಲಿ ಕುತೂಹಲ ಇದೆ, ಅದನ್ನ ಯಶಸ್ವಿ ಮಾಡಿ ನಮಗೆ ಎಲ್ಲ ಮಾಹಿತಿ ಕೊಡಿ. ಇಲ್ಲದಿದ್ರೆ ನೀವು ಎಲ್ಲೂ ತಲೆಯೆತ್ತಬಾರದು ಅನ್ನೋ ಹಾಗೆ ಮಾಡ್ತೀವಿ' ಅಂತ. ಅಮಿತ್ ಹೆದರಿದ. ಅವನ ಕಂಪನಿಯಿಂದ ಒಂದಿಬ್ಬರನ್ನ ನಮ್ಮ ಪ್ರಯೋಗಕ್ಕೆ ತ್ಯಾಗ ಮಾಡಿದ; ಪೇಪರ್-ಗಳಲ್ಲಿ ಅವರು ಕಾಣೆ ಅಂತ ಸುದ್ದಿ ಬಂದಿತ್ತು. ನಮ್ಮ ಪ್ರಯೋಗ ಬರ್ತಾ ಬರ್ತಾ ಯಶಸ್ವಿಯಾಗ್ತಾ ಬಂತು. ಇನ್ನೊಂದೆರಡು ಸಲ ಟೆಸ್ಟ್ ಮಾಡಬೇಕು ಅನ್ನೋ ಹಂತದಲ್ಲೇ ನಿನ್ನನ್ನ ಅಮಿತ್ ಕರಕೊಂಡು ಬಂದಿದ್ದು.

ಮಿಕ್ಕಿದ್ದೆಲ್ಲ ನಿಂಗೆ ಗೊತ್ತೇ ಇದೆ."

'ಮೂರನೆಯ ಪ್ರಶ್ನೆಗೆ ಉತ್ತರ?' ಎಂಬಂತೆ ಮೂರು ಬೆರಳುಗಳು ತೋರಿಸಿದಳು. ಅವನು ತನ್ನ ಒಂದು ಕಂಪ್ಯೂಟರ್-ನತ್ತ ತಲೆಯಿಂದಲೇ ಸಂಜ್ಞೆ ಮಾಡಿದ. ಅಲ್ಲಿಗೆ ಹೋಗಿ ಡೈರಿಯೊಂದರಲ್ಲಿದ್ದ ವಿಳಾಸವನ್ನು ('ಅಮಿತ್ PIC -- ಪಾರ್ಟ್ನರ್ ಇನ್ ಕ್ರೈಂ' ಎಂಬ ಹೆಸರಿನಡಿ ದಾಖಲಾಗಿತ್ತು) ಅದ್ನಾನ್ ಗುರುತು ಮಾಡಿಕೊಂಡ.

"ಬ್ರೇನ್ ಡೇಟಾ ಕಂಪ್ಯೂಟರ್-ಗೆ ಹಾಕಿ, ಮತ್ತೆ ವಾಪಸ್ ಮೆದುಳಿಗೆ ಹೇಗೆ ಹಾಕೋದು?"
ಅವಳ ಪ್ರಶ್ನೆಗೆ ಉತ್ತರವಾಗಿ ರಾಟ್ವೈಲರ್ "ನನ್ನ ಪ್ರಯೋಗದ ರಹಸ್ಯ ನನ್ನ ಜೊತೆಗೆ ಸಾಯಲಿ!" ಎಂದ.

ಅವನನ್ನು ಒಂದು ಕ್ಷಣ ನೋಡಿ, ಅವನು ಕುಳಿತಿದ್ದ ಕುರ್ಚಿಯನ್ನು ತಳ್ಳಿ ಹತ್ತಿರವಿದ್ದ ಒಂದು ಕಂಪ್ಯೂಟರ್-ನ ಪಕ್ಕಕ್ಕೆ ತಂದು ನಿಲ್ಲಿಸಿದಳು. ತಲೆಗೆ ಹಾಕಿಕೊಳ್ಳುವಂತಹ ತಟ್ಟೆಯಾಕಾರದ ಒಂದು ಯಂತ್ರದಿಂದ ಹಲವು ವಯರ್-ಗಳು ಕಂಪ್ಯೂಟರ್-ಗೆ ಹೋಗುತ್ತಿದ್ದವು. ಆ ಯಂತ್ರವನ್ನು ರಾಟ್ವೈಲರ್-ನ ತಲೆಗೆ ಹಾಕಿದಳು. ಅದ್ನಾನ್ ಆ ಹೊತ್ತಿಗೆ ಮೆದುಳಿನ ಮಾಹಿತಿ ವರ್ಗಾಯಿಸುವ ಪ್ರೋಗ್ರಾಮ್-ಅನ್ನು ಗುರುತಿಸಿದ್ದ.

"ಸರಿಯಾಗಿ ಇದನ್ನ ಹೇಗೆ ಮಾಡುವುದು ಹೇಳು" ಎಂದು ಅವಳು ಮತ್ತೆ ಅಂದಳು. ಮತ್ತೆ ರಾಟ್ವೈಲರ್-ನಿಂದ ಮೌನ.

ಅವಳು ಅದ್ನಾನ್-ಗೆ ಸಂಜ್ಞೆ ಮಾಡಿದಳು. ಅವನು ಕಂಪ್ಯೂಟರ್-ನ ಒಂದು ಕೀ ಒತ್ತಿದ ಕೂಡಲೆ ಪ್ರೋಗ್ರಾಮ್ ನಿಶ್ಶಬ್ದವಾಗಿ ಓಡಲಾರಂಭಿಸಿತು. ಅವಳನ್ನು ಭಾವರಹಿತ ಕಣ್ಣುಗಳಿಂದ ನೋಡುತ್ತಿದ್ದ ರಾಟ್ವೈಲರ್ ಎರಡು ಕ್ಷಣಗಳಲ್ಲಿ ಪ್ರಜ್ಞೆ ಕಳೆದುಕೊಳ್ಳಲಾರಂಭಿಸಿದ. ಆಗ "ಆ.....ನಾಯಿ ಬಾಲ...ಏನು ಗೊತ್ತಾಯ್ತಾ?" ಎಂದ, ಕ್ಷೀಣವಾಗುತ್ತಿದ್ದ ಧ್ವನಿಯಲ್ಲಿ.

"ಇಲ್ಲ. ಏನು? ಹೇಳು!" ಸ್ವಲ್ಪ ಉದ್ವೇಗದಿಂದ ಎಂದಳು. ಅವನು ಮುಗುಳ್ನಕ್ಕು "ನಿಮ್ಮ ಹಿಂದೂ ಪುರಾಣ...ಕತೆ...ಜ್ಞಾಪಕ ಇಲ್ವಾ? ನಿಂಗೆ....ನಿನ್ನ ಕತೆ-ನೇ....." ಎಂದು ಮೂರ್ಛೆ ಹೋದ. ಅವಳು ಪ್ರಯೋಗವನ್ನು ನಿಲ್ಲಿಸುವುದಾಗಿ ಅದ್ನಾನ್-ನನ್ನು ಆದೇಶಿಸಿದರೂ, ಅವನಿಗೆ ಅದು ಹೇಗೆ ಮಾಡಬೇಕು ಎಂದು ತಿಳಿಯಲಿಲ್ಲ. ರೇ ರಾಟ್ವೈಲರ್-ನ ಮೆದುಳು ಸಂಪೂರ್ಣವಾಗಿ ಕಂಪ್ಯೂಟರ್-ಗೆ ಬಂದಿಳಿದಿತ್ತು.

"ಒಂದೆರಡು ದಿನ ಪ್ರಯತ್ನ ಪಟ್ಟರೆ ಹೇಗೆ ಮಾಡೋದು ಅಂತ ನಂಗೆ ಗೊತ್ತಾಗಬೋದು. ಅಪ್ಲೋಡ್-ಡೌನ್ಲೋಡ್ ಬೇರೆ ಬೇರೆ ಪ್ರೋಗ್ರಾಮ್-ಗಳು; ಅಪ್ಲೋಡ್-ಗೆ ಇವನದೇ ಏನೋ ವಿಶೇಷ ಪಾಸ್ವರ್ಡ್ ಇದ್ದ ಹಾಗಿದೆ. ಒಂದಿಷ್ಟು ಪಾಸ್ವರ್ಡ್ ಕ್ರ್ಯಾಕಿಂಗ್ ಪ್ರೋಗ್ರಾಮ್-ಗಳು ಟ್ರೈ ಮಾಡಿ ನೋಡಬೋದು..."

"ಬೇಡ. ಇಷ್ಟು ಸಾಕು" ಎಂದು ಅವಳು ಹೊರಗೆ ನಡೆದಳು. ಏನು ಮಾಡುವುದೆಂದು ತಿಳಿಯದೆ ಅವನು ಅವಳನ್ನೇ ಹಿಂಬಾಲಿಸಿದ. ರಾಟ್ವೈಲರ್-ನ ಮೆದುಳುಶಕ್ತಿ ರಹಿತ ದೇಹವನ್ನು ಕಂಪ್ಯೂಟರ್ ಜೀವಂತವಾಗಿಟ್ಟಿತ್ತು.


'ಫಲಾಮೃತ'ದಿಂದ ಹೊರಗೆ ಹೋಗುತ್ತ ಅವಳು ಮುಖ್ಯ ವಿದ್ಯುತ್-ಸ್ವಿಚ್ಚನ್ನು ಆರಿಸಿ ಹೊರನಡೆದಳು. ಸ್ವಲ್ಪ ಹೊತ್ತಿನಲ್ಲಿ, ಕೆಳಗೆ, ಒಂದೆರಡು ಎಚ್ಚರಿಕೆಗಳನ್ನು ನೀಡಿ ಕಂಪ್ಯೂಟರ್ ಆರಿತು.

ಭಾನುವಾರ, ಮೇ 29, 2011

ನೆನಪುಗಳ ಮಾತು ಮಧುರ -- ೮

(ಕಳೆದ ಭಾಗದಲ್ಲಿ: ರಿಚರ್ಡ್ ಲೂಯಿಸ್ ಎಂಬ ವ್ಯಕ್ತಿ ಚಿಕ್ಕ ವಯಸ್ಸಿನಲ್ಲಿ ನಡೆದ ಘಟನೆಯಿಂದ ಪ್ರೇರೇಪಿತನಾಗಿ ಚರ್ಚಿನಲ್ಲಿ ಪಾದ್ರಿಯಾಗಲು ನಿರ್ಧರಿಸುತ್ತಾನೆ. ಮೈಸೂರಿನ ಫಿಲೋಮಿನಾ ಚರ್ಚಿಗೆ ಸೇರಿ ಯಥೋಚಿತವಾಗಿ ದೈವಕಾರ್ಯಗಳನ್ನು ನಿರ್ವಹಿಸುತ್ತಾ ಬದುಕುತ್ತಿರುತ್ತಾನೆ. ಅವನ ಐವತ್ತನೆಯ ವರ್ಷದ ಒಂದು ಸಾಯಂಕಾಲ ಯಾರೋ ಅವನನ್ನು ಮಾತನಾಡಿಸುತ್ತಿರುವಾಗ ಮತ್ತಾರೋ ಅವನ ತಲೆಗೂದಲನ್ನು ಕಿತ್ತು ಮಾಯವಾಗುತ್ತಾರೆ. ಇದರ ಬಗ್ಗೆ ಚಿಂತಿಸುತ್ತ ಆ ರಾತ್ರಿ ಮಲಗಿದ್ದಾಗ ಚರ್ಚಿನ ಬಾಗಿಲನ್ನು ತಟ್ಟಿ ಒಳಗೆ ಬರಲು ಬೇಡಿದ ಒಂದು ದೀನ ಸ್ತ್ರೀ ಕಂಠ ಕೇಳಿ ಬಂದು ರಿಚರ್ಡ್ ಬಾಗಿಲನ್ನು ತೆಗೆಯುತ್ತಾನೆ. ಆಗ ಒಳಗೆ ಬಂದವಳು ಕೈಯಲ್ಲಿ ಪಿಸ್ತೂಲು ಹಿಡಿದಿದ್ದು, ಅವನನ್ನು ತಪ್ಪೊಪ್ಪಿಗೆಯ ಕೋಣೆಗೆ ಕರೆದೊಯ್ದು ಕೂರಿಸುತ್ತಾಳೆ.)

ಶಿಲುಬೆಯ ಇಬ್ಬದಿಗಳಲ್ಲಿ ಹೊತ್ತಿಸಿದ ಮೇಣದ ಬತ್ತಿಗಳಿಂದ ಬೆಳಕು ಹರಿದು ಬರುತ್ತಿತ್ತು. ಆ ಬೆಳಕಿನಲ್ಲಿ ರಿಚರ್ಡ್-ನ ಮುಖದ ಒಂದು ಕಡೆಗೆ ಕಾಂತಿ ಬಂದಂತಿತ್ತು.

"ಚಿಕ್ಕ ವಯಸ್ಸಲ್ಲಿ ಇಲ್ಲಿಗೆ ಸೇರಿದೆ; ಹಿಂದೆ-ಮುಂದೆ ನೋಡದೆ, ಯೋಚನೆ ಮಾಡದೆ ತೊಗೊಂಡ ನಿರ್ಧಾರ. ನನ್ನ ಭಾವನೆಗಳನ್ನ, ಬಯಕೆಗಳನ್ನ ಜೀವನ ಪೂರ್ತಿ ಶಮನ ಮಾಡಬೋದು ಅನ್ನೋ ಭರವಸೆ ನನಗಿತ್ತು. ನೆಂಟ-ಇಷ್ಟ-ಬಂಧು-ಬಳಗ, ದೈವದ ಕಡೆ ನಮ್ಮ ಪ್ರಯಾಣದಲ್ಲಿ ಇವೆಲ್ಲ ಲೌಕಿಕ ಅಡ್ಡಿಗಳು, ತೊರೀಬೇಕಾದಂಥವು ಅನ್ನೋ ಭಾವನೆ ಆಗ. ಹೀಗೇ ಸುಮಾರು ವರ್ಷ ನಡೀತು. ಆದ್ರೆ ನನ್ನ ದೈವ ನಿಷ್ಥೆ ಯಾಕೋ ಪ್ರಕೃತಿ ವಿರುದ್ಧ ಗೆಲ್ಲಕ್ಕೆ ಶಕ್ತಿ ಕೊಡಲಿಲ್ಲ."
"ಪ್ರಕೃತಿ" ಎಂದು ಆ ಒಂದು ಪದವನ್ನು ಅನುಕರಣೆ ಮಾಡಿದಳು.
"ಹೌದು, ಪ್ರಕೃತಿ. ನನ್ನ ಮನಃಸ್ಥಿತಿ ನೀವು ಅರ್ಥ ಮಾಡ್ಕೋ..."
ಆ ಮಾತನ್ನು ಅಲ್ಲಿಗೆ ತಡೆದು ತಪ್ಪೊಪ್ಪಿಗೆಯನ್ನು ಮುಂದುವರಿಸುವಂತೆ ಸೂಚಿಸಿದಳು.
"ನನ್ನ ಕಣ್ಣ ಮುಂದೆನೇ ಎಷ್ಟೋ ಜನ ಒಬ್ಬರ ಜೊತೆ ಒಬ್ಬರು ಸೇರಿ ಸುಖವಾಗಿರೋದು ನೋಡ್ತಿದ್ದೆ. ಇವರ ಸಂಬಂಧಗಳು ಕ್ಷಣಿಕ ಇರಬೋದು, ಆದ್ರೂ ಎಷ್ಟು ಸಂತೋಷವಾಗಿದ್ರು. ಎಷ್ಟೇ ದೈವಾಧೀನ ಆಗಿದ್ರೂ, ಈ ಸುಖ ನನಗೆ ಸಿಗಲಿಲ್ಲವಲ್ಲ ಅನ್ನೋ ಕೊರಗು ನನ್ನಲ್ಲಿ ಬಲಿಯಕ್ಕೆ ಶುರು ಆಯ್ತು. ಇದನ್ನೆಲ್ಲಾ ಅನುಭವಿಸಿ ಆಮೇಲೆ ಬೇಡ ಅನ್ನಬೋದಾಗಿತ್ತು ಅನ್ನೋ ಪಶ್ಚಾತ್ತಾಪ ಹುಟ್ಕೋತು ಮನಸ್ಸಲ್ಲಿ. ಆತ್ಮ ಶಾಶ್ವತ, ಈ ದೇಹ ಅಲ್ಲ. ಹಾಗಿರೋವಾಗ, ಈ ದೇಹದ ಸುಖ ಅನುಭವಿಸಿದರೆ ಆತ್ಮಕ್ಕೇನೂ ಕಳಂಕ ಬರಲ್ಲ ಅನ್ನೋ ಧಾಟೀಲಿ ನನ್ನ ಯೋಚನೆ ಓಡಿತು. ಕೊಲ್ಲಬಾರದು,  ಕದೀಬಾರದು, ಇವೆಲ್ಲ ಭಗವಂತ ಮೋಸಸ್-ಗೆ ಹೇಳಿದ. ಆದ್ರೆ ಒಂದು ಹೆಣ್ಣಿನ ಜೊತೆ ಸಂಬಂಧ ಇಟ್ಕೋಬಾರದು ಅಂತ ಹೇಳಿಲ್ಲವಲ್ಲ? ಆದ್ದರಿಂದ ಇದರಲ್ಲೇನೂ ತಪ್ಪಿಲ್ಲ ಅಂತ ನಾನು ನಿರ್ಧಾರ ಮಾಡಿದೆ. ಮಾರ್ಕ್ ಟ್ವೇನ್ ಒಂದು ಕಡೆ ಬರ್ದಿದಾನಲ್ಲ, 'ಮನುಷ್ಯರು ಕಲ್ಪಿಸಿಕೊಂಡಿರೋ ಸ್ವರ್ಗದಲ್ಲಿ ದೈಹಿಕ ಸಂಬಂಧಗಳು ಇಲ್ಲ. ಇದೆಂಥ ಸ್ವರ್ಗ?!' ಅಂತ.

ಭಾನುವಾರ-ಭಾನುವಾರ ಬಂದು ಹೋಗ್ತಿದ್ದ ಭಕ್ತರನ್ನ ಸೂಕ್ಷ್ಮವಾಗಿ ಗಮನಿಸಕ್ಕೆ ಶುರು ಮಾಡಿದೆ. ಎಷ್ಟೋ ಹುಡುಗಿಯರು; ಅವರನ್ನ ಚನ್ನಾಗೇ ಮಾತಾಡಿಸಿದೆ. ಆದ್ರೆ ಯಾರ ಜೊತೇಲೂ ಹೆಚ್ಚು ಸಲಿಗೆಯಿಂದ ಇರೋ ಸಾಧ್ಯತೆ ಕಾಣಿಸಲಿಲ್ಲ. ಸ್ವಲ್ಪ ಆ ಕಡೆ ಪ್ರಯತ್ನ ಪಡಕ್ಕೆ ಶುರು ಮಾಡಿದ್ರೆ ಅವರು ಚರ್ಚಿಗೆ ಬರೋದೇ ನಿಲ್ಲಿಸ್ತಿದ್ರು. ಎಷ್ಟೋ ಪ್ರಯತ್ನಗಳು ಈ ಥರ ಕೊನೆಗೊಂಡಿವೆ. ನಾನು ಇವೆಲ್ಲಾ ಹುಷಾರಾಗಿ ಮಾಡ್ತಿದ್ದೆ ಅನ್ಕೊಂಡಿದ್ದೆ. ಆದ್ರೆ ಇದನ್ನೆಲ್ಲಾ ಒಬ್ಬ ವ್ಯಕ್ತಿ ಗಮನಿಸ್ತಾ ಬಂದ್ರು. ನನ್ನ ಬಲಹೀನತೆ ಅವರಿಗೆ ಗೊತ್ತಾಯ್ತು; ಅದಕ್ಕೆ ಪರಿಹಾರ ನನಗೆ ಇನ್ಮೇಲೆ ಪ್ರತಿ ವಾರ ಸಿಗೋ ಹಾಗೆ ಮಾಡ್ತೀನಿ ಬೇಕಿದ್ದರೆ ಅಂದ್ರು. ಮೊದಲು ಇದನ್ನ ಛೀ ಮಾಡಿ ಬೇಡ ಅಂದಿದ್ದೆ; ಆದ್ರೆ ಅವರು ಬಿಡಲಿಲ್ಲ. ಮೂರು ತಿಂಗಳು ಹೀಗೇ ಪೀಡಿಸಿದ್ರು. ಕೊನೆಗೆ ನನ್ನ ಬಲಹೀನತೆಗೆ, ಅವರ ಒತ್ತಾಯಕ್ಕೆ ಸೋತೆ. ಚರ್ಚಿನ ಹಿಂದಿನ ಗೇಟಿನ ಪಕ್ಕ ಒಂದು ರಸ್ತೆ ಹೋಗತ್ತೆ; ಅದರಲ್ಲೇ ಸ್ವಲ್ಪ ದೂರ ನಡೆದರೆ ಒಂದು ಓಣೀಲಿ ಪುಟ್ಟ ಮನೆ ಇದೆ. ಅದು ಆ ಮನುಷ್ಯನ ತಾತನ ಮನೆಯಾಗಿತ್ತಂತೆ, ಅಲ್ಲಿಗೆ ಬರಕ್ಕೆ ಹೇಳಿದ್ರು. ಅಲ್ಲಿಗೆ ಹೋದಾಗ ಆತ, ಜೊತೆಗೆ ಯಾರೋ ಒಬ್ಬಳು. ನನ್ನ ಕಣ್ಣಿಗೆ ಅಪ್ಸರೆ ಥರ ಕಾಣಿಸಿದಳು. ಬಾಗಿಲು ಎಳಕೊಂಡು ಹೊರಗೆ ಹೋದ ಆತ. ಭಗವಂತ, ಇದು ಪಾಪ ಆಗಿದ್ದರೆ ಕ್ಷಮಿಸು ಅಂತ ನಾನು ಬೇಡಿಕೊಂಡೆ.

ನನ್ನ-ಆತನ ಸಂಬಂಧ ಹೀಗೆ ಶುರು ಆಯ್ತು. ವ್ಯಾಪಾರ ವಲಯ ಕಟ್ಟೋದರಲ್ಲಿ ಬಹಳ ಕೈವಾಡ ಇತ್ತು ಆತನದ್ದು. ಎಫೆಮೆರಾ ಕಂಪನೀಲಿ ದೊಡ್ಡ ಕೆಲಸದಲ್ಲಿದ್ದ. ಆತನಿಗೆ ನನ್ನ ಸ್ನೇಹ ಯಾಕೆ ಬೇಕಿತ್ತು ಅಂದ್ರೆ, ಸರ್ಕಾರದಲ್ಲಿ ಈ ವಲಯಕ್ಕೆ ಸಂಬಂಧ ಪಟ್ಟ ಹಲವು ಮಂತ್ರಿಗಳು ಈ ಚರ್ಚಿಗೆ ಬರೋ ಭಕ್ತರಾಗಿದ್ರು. ನನ್ನ ಮೇಲೆ ಗೌರವ ಇಟ್ಟು, ನನ್ನ ಮಾತಿಗೆ ಬೆಲೆ ಕೊಡೋ ಜನ ಆಗಿದ್ರು. ಆ ಮನುಷ್ಯನಿಗೆ ಬೇಕಾದ ಕೆಲಸ ನಡಿಯೋ ಥರ ಆ ಮಂತ್ರಿಗಳ ಜೊತೆ ಮಾತಾಡು ಅಂದ; ಕೃತಜ್ಞತೆಯಿಂದ, ನಮ್ಮಲ್ಲಿ ಬೆಳೆದಿದ್ದ ಸ್ನೇಹದಿಂದ ಹಾಗೆ ಮಾಡಿದೆ. ಆತನಿಗೆ ಅನುಕೂಲ ಆಗೋ ಹಾಗೆ ಕೆಲಸ ನಡೀತು; ಹಾಗೆ ಅಂತ ಕೆಲಸ ಮುಗಿದ ಮೇಲೆ ಸ್ನೇಹ ಕೂಡ ಮುಗೀತು ಅನ್ನಲಿಲ್ಲ ಆತ.

ರೇ ರಾಟ್ವೈಲರ್ ಆತನ ಮೂಲಕ ನನಗೆ ಭೇಟಿ ಆಗಿದ್ದು. ಯಾವ ದೇಶದಲ್ಲೂ ಪ್ರೋತ್ಸಾಹ ಸಿಗದೇ ಮೈಸೂರಿಗೆ ಬಂದಿದ್ದ ಅವನನ್ನ ಇಲ್ಲಿಗೆ ಕರಕೊಂಡು ಬಂದ. ಅವನ ಪ್ರಯೋಗಕ್ಕೆ ಗಿನೀ ಪಿಗ್ ಬೇಕಿತ್ತಂತೆ. ಅವರ ಈ ಪ್ರಯೋಗದಿಂದ ಲೋಕಕ್ಕೆ ಒಳ್ಳೇದೇ ಆಗತ್ತೆ, ಆದರೂ ಸರ್ಕಾರ ಕ್ರಿಮಿನಲ್-ಗಳನ್ನ ಅವರಿಗೆ ಪರೀಕ್ಷೆಗೆ ಅಂತ ಕೊಡಕ್ಕೆ ಒಪ್ಪಲಿಲ್ಲ ಅಂದ್ರು. ನನ್ನ ಗೆಳೆಯನಿಗೋಸ್ಕರ ಸಹಾಯ ಮಾಡಕ್ಕೆ ಒಪ್ಕೊಂಡೆ. ಕೆಟ್ಟವರ ಮೇಲೆ ವೈಜ್ಞಾನಿಕ ಪ್ರಯೋಗ ಮಾಡಿದ್ರೆ ಏನು ತಪ್ಪು? ಆ ಪ್ರಯೋಗದಿಂದ ಒಳ್ಳೆ ಉಪಯೋಗ ಆಗತ್ತಲ್ಲ, ಏನೂ ತಪ್ಪಿಲ್ಲ ಅನ್ಕೊಂಡೆ. ಇದೇ ಕಂಫೆಶನ್ ಬೂಥಲ್ಲಿ ನನ್ನ ಹತ್ರ ಜನ ತಮ್ಮ ತಪ್ಪೆಲ್ಲ ಹೇಳ್ಕೋತಾ ಇದ್ದರು; ಇದು ದೊಡ್ಡ ತಪ್ಪು ಅನಿಸಿದವರನ್ನೆಲ್ಲ ನಾನು ರಾಟ್ವೈಲರ್-ಗೆ ಒಪ್ಪಿಸ್ತಿದ್ದೆ. ಪ್ರಾರ್ಥನೆ ಆದಮೇಲೆ ನನ್ನ ಕೋಣೆಗೆ ಏನೋ ಮಾತಾಡೋ ಸಲುವಾಗಿ ಕರೀತಿದ್ದೆ, ಅವರು ಬಂದಾಗ ಕಮ್ಯೂನಿಯನ್ ವೈನ್-ನಲ್ಲಿ ನಿದ್ದೆ ಮಾತ್ರೆ ಹಾಕಿ ಕುಡಿಸಿ, ಪ್ರಜ್ಞೆ ತಪ್ಪಿಸಿ, ರಾಟ್ವೈಲರ್ ಪ್ರಯೋಗಕ್ಕೆ ದಾನ ಮಾಡ್ತಿದ್ದೆ. ಅವರು ರಾಟ್ವೈಲರ್-ನ ಲ್ಯಾಬ್-ಗೋ ಅಥವಾ ನನ್ನ ಗೆಳೆಯನ ತಾತನ ಮನೆಗೋ ಕರಕೊಂಡು ಹೋಗ್ತಿದ್ರು (ಅಲ್ಲೂ ಕೂಡ, ಒಂದು ಕೋಣೆ-ನ ಲ್ಯಾಬ್ ಥರ ಮಾಡಿದ್ರು. ಪ್ರಜ್ಞೆ ತಪ್ಪಿದವರನ್ನ ಚರ್ಚಿಂದ ಲ್ಯಾಬ್-ಗೆ ಸಾಗಿಸೋ ಸಮಯದಲ್ಲಿ ಏನಾದ್ರೂ ಅನಾಹುತ ಆದ್ರೆ ಅಂತ ಇದನ್ನ ಎಮರ್ಜೆನ್ಸಿ ಲ್ಯಾಬ್-ಆಗಿ ನನ್ನ ಗೆಳೆಯ ಮಾಡಿದ್ದ). ಈ ಸರಬರಾಜು ಸುಮಾರು ದಿನ ನಡೀತು.

ನನ್ನ ಎಫೆಮೆರಾ ಗೆಳೆಯ ಒಂದು ದಿನ ಬಹಳ ನೊಂದುಕೊಂಡು ನನ್ನ ಹತ್ರ ಬಂದು 'ಫಾದರ್, ಪರಿಸ್ಥಿತಿ ಹದ ಮೀರಿದೆ' ಅಂದ. ರಾಟ್ವೈಲರ್ ಲ್ಯಾಬ್ ಮುಚ್ಚಬೇಕು ಅಂತ ಕೋರ್ಟಿನ ಆರ್ಡರ್ ಬಂದಿತ್ತು. ಆದ್ರೆ ಇವರು ಯಾರಿಗೂ ತಿಳೀದಿರೋ ಹಾಗೆ ಪ್ರಯೋಗ ಮಾಡ್ತಿದ್ರು. ಅಂಥದ್ದರಲ್ಲಿ ಎಷ್ಟೋ ಜನ ಸತ್ತಿರೋದು ಅವರಿಗಲ್ಲದೆ ಸರ್ಕಾರದಲ್ಲಿ ಯಾರೋ ಒಬ್ಬನಿಗೆ ಗೊತ್ತಾಗಿತ್ತಂತೆ. ಯಾರು ಅಂತ ಅವರಿಗೂ ಗೊತ್ತಿಲ್ಲ, ಆದ್ರೆ ಸಂಪರ್ಕ ಮಾಡಿ ಎಲ್ಲ ವಿಷಯ ಮೀಡಿಯಾ-ಗೆ ತಿಳಿಸಿಬಿಡ್ತೀನಿ ಅಂತ ಬ್ಲಾಕ್-ಮೇಲ್ ಮಾಡಿದನಂತೆ. ಆ ಪರಿಸ್ಥಿತೀಲಿ ನನ್ನ ಗೆಳೆಯ ಒಬ್ಬರನ್ನ ಕರಕೊಂಡು ಬಂದಿದ್ದ ಚರ್ಚಿಗೆ. ಅದು....ನೀವು. 'ಬ್ಲಾಕ್-ಮೇಲ್ ಮಾಡ್ತಿದಾರೆ, ಫಾದರ್. ಯಾವ ದಿನಾನಾದ್ರೂ ನಾವು ಅರೆಸ್ಟ್ ಆಗಬೋದು. ಈ ಪ್ರಯೋಗ ಇನ್ನೇನು ಮುಗಿಯೋ ಹಂತಕ್ಕೆ ಬಂತು, ಈಗ ನಿಲ್ಲಿಸಕ್ಕಾಗಲ್ಲ. ಇವಳು...ಯಾವ ತಪ್ಪನ್ನೂ ಮಾಡಿಲ್ಲ, ಆದ್ರೆ ನನಗೆ ಬೇರೆ ದಾರಿ ಕಾಣಲಿಲ್ಲ' ಅಂತ ಆ ನನ್ನ ಗೆಳೆಯ ಹೇಳಿದ. ಅವನನ್ನ, ಅವಳನ್ನ....ನಿಮ್ಮನ್ನ ಬ್ಲೆಸ್ ಮಾಡಿ ಕಳಿಸಿದೆ.

'ಫಾದರ್, ಇವತ್ತು ರಾತ್ರಿ ಪ್ರಯೋಗ ನಡಿಯತ್ತೆ. ಮಾಮೂಲಿ ಜಾಗ. ನನಗೇನೋ ಇದು ಯಶಸ್ವಿಯಾಗತ್ತೆ ಅನ್ನಿಸ್ತಿದೆ.  ಬಟ್ ನಾನು ಅನಿವಾರ್ಯವಾಗಿ ಇವತ್ತು ರಾತ್ರಿ ಒಂದು ಮೀಟಿಂಗಿಗೆ ಹೋಗಬೇಕು. ನೀವು ಅಲ್ಲಿಗೆ ಬಂದು ಇವಳನ್ನ ಅವಳ ಮನೆಗೆ ವಾಪಸ್ ಬಿಡ್ತೀರಾ? ಅಡ್ರೆಸ್ ಕೊಟ್ಟಿರ್ತೀನಿ' ಅಂತ ಕೇಳಿಕೊಂಡ. ಹಾಗೇ ಆಗಲಿ ಅಂತ ರಾಟ್ವೈಲರ್ ಲ್ಯಾಬ್-ಗೆ ರಾತ್ರಿ ಹೋದೆ. ನಾನು ಹೋಗೋ ಹೊತ್ತಿಗೆ ಕೋಲಾಹಲ ಆಗಿತ್ತು. ಪ್ರಯೋಗ ಯಶಸ್ವಿಯಾಗಿತ್ತು ಅಂತ ಯಾರೋ ತಿಳಿಸಿದರು. ಅರ್ಧ ಮಾತ್ರ ಅಂತ ಇನ್ನೊಬ್ಬರು ಅಂದ್ರು. ಏನು ಅಂತ ರಾಟ್ವೈಲರ್-ನ ಕೇಳಿದಾಗ ಅದೇನೋ ಒಂದು ದಿಕ್ಕಲ್ಲಿ 'ಬ್ರೇನ್ ಡೇಟಾ ಡಂಪ್' ಅಂತ ಏನೋ ಸರಿಯಾಗಿ ಆಗಿತ್ತಂತೆ. ಅದೇ ಡೇಟಾ ವಾಪಸ್ ಹೋಗೋವಾಗ ಸರಿ ಹೋಗಲಿಲ್ಲವಂತೆ. ಸೋ, ನೀವು 'ಬ್ರೇನ್ ಡೆಡ್' ಥರ ಆಗಿದ್ರಿ ಅಂತ ಹೇಳಿದ. ಮೆದುಳೆಲ್ಲ ಖಾಲಿಯಾಗಿತ್ತಂತೆ. 'ಅದನ್ನ ಸರಿ ಮಾಡೋದು ನನ್ನ ಕೈಲಿ ಸಾಧ್ಯ ಇಲ್ಲ, ಎಲ್ಲಾದ್ರೂ ಬಿಸಾಕಿ ಇವಳನ್ನ' ಅಂದ. ಆದ್ರೆ ಅವಳನ್ನ...ನಿಮ್ಮನ್ನ ಮನೆಗೆ ಬಿಡ್ತೀನಿ ಅಂತ ನನ್ನ ಗೆಳೆಯನಿಗೆ ಮಾತು ಕೊಟ್ಟಿದ್ದೆ. 'ನಾನೇ ಬಿಸಾಕ್ತೀನಿ' ಅಂತ ಅವರಿಗೆ ಹೇಳಿ ನಿಮ್ಮನ್ನ ಅಲ್ಲಿಂದ ಕರಕೊಂಡು ಹೊರಟೆ.

ನಿಮ್ಮ ಮನೆಗೆ ಹೋಗೋ ದಾರೀಲೇ ಈ ಚರ್ಚಿದೆ. ಚರ್ಚ್ ಹತ್ರ ಇರೋವಾಗ ಇದ್ದಕ್ಕಿದ್ದಂತೆ ಮಳೆ ಶುರುವಾಯ್ತು. ಕಣ್ಣಿಗೆ ಕಾಣೋ ಅಷ್ಟು ದೂರದಲ್ಲಿ ನಮ್ಮ ಚರ್ಚಿದ್ದರೂ ಒಳಗೆ ಬರಕ್ಕೆ ಸಾಧ್ಯ ಇರಲಿಲ್ಲ, ಅಷ್ಟು ಜೋರಾದ ಮಳೆ. ಅಲ್ಲೇ ಕಾಣ್ತಿದ್ದ ನನ್ನ ಗೆಳೆಯನ ತಾತನ ಮನೆಯೊಳಗೇ ನುಗ್ಗಿದೆ, ನಿಮ್ಮನ್ನೂ ಹೊತ್ತುಕೊಂಡು. ಒದ್ದೆಯಾಗಿದ್ದ ಬಟ್ಟೆಗಳನ್ನ ತೆಗೆದು ಹೊಸದನ್ನ ಹಾಕೋದಕ್ಕೆ ಶುರು ಮಾಡಿದೆ. ನಿಮ್ಮಷ್ಟು ಚನ್ನಾಗಿರೋರನ್ನ ನಾನು ನೋಡೇ ಇರಲಿಲ್ಲ. ಒಂದು ಅಮಾನುಷ ಕಾಮ ನನ್ನನ್ನಾವರಿಸಿತು. ಆಗ...ನೀವು ಪ್ರಜ್ಞೆ ತಪ್ಪಿದ್ದರ ದುರುಪಯೋಗ ಪಡಕೊಂಡೆ."

ಹೊರಗೆಲ್ಲೋ ದೂರದಲ್ಲಿ ಒಂದೆರಡು ವಾಹನಗಳು ಹೋದ ಸದ್ದು ಕೇಳಿಸಿತು. ಚರ್ಚಿನೊಳಗೆ ಹೃದಯದ ಮಿಡಿತವೂ ಕೇಳಿಸುವಂತಹ ಮೌನ. ತನ್ನ ಸುದೀರ್ಘ ಕಂಫೆಶನ್-ಅನ್ನು ಕೇಳಿ ಅವಳು ಸ್ವಲ್ಪ ಹೊತ್ತು ಸುಮ್ಮನಿದ್ದಳು. ತನ್ನ ಕಡೆಗೆ ಒಂದು ಕಾಗದವನ್ನು ತಳ್ಳಿದಳು. ಅದರಲ್ಲಿ ಯಾವುದೋ ಡಾಕ್ಟರ್-ರ ವರದಿಯಿತ್ತು; ಅವಳನ್ನು ಬಲಾತ್ಕಾರ ಮಾಡಿದುದರ ಬಗೆಗಿನ ವರದಿ. ಅವಳ ಮೈಯ್ಯಿಂದ ಸಿಕ್ಕ ರೇಪಿಸ್ಟ್-ನ ಡಿ-ಏನ್-ಏ ತನ್ನ (ರಿಚರ್ಡ್-ನ) ಡಿ-ಏನ್-ಏ-ಅನ್ನು ಹೋಲುತ್ತಿತ್ತು ಎಂದು ಅದರಲ್ಲಿ ಬರೆಯಲಾಗಿತ್ತು. "ಹೇಗೆ...?" ಎಂದು ಕೇಳಲು ಹೋದ ರಿಚರ್ಡ್-ನಿಗೆ ಆ ಸಾಯಂಕಾಲ ತನ್ನ ತಲೆಗೂದಲನ್ನು ಯಾರು, ಏತಕ್ಕೆ ಕಿತ್ತೊಯ್ದರು ಎಂದು ಅರಿವಾಯಿತು.

"ಆಮೇಲೆ?" ಎಂದು ಅವಳು ಕೇಳಿದಳು.  ಆ ಕರ್ಣಕಠೋರ ಕತೆಯನ್ನು ಕೇಳಿಯೂ ಅವಳ ಧ್ವನಿಯಲ್ಲಿ ಬಿರುಸಾಗಲಿ, ಕೋಪವಾಗಲಿ ಗೋಚರವಾಗಲಿಲ್ಲ.
"ಆಮೇಲೆ...ನನ್ನ ಕೃತ್ಯಕ್ಕೆ ನಾನೇ ಹೇಸಿದೆ. ಆ ಮನೇಲಿ ಈ ಥರದ ಕೆಲಸಗಳು ನಡೆದಿದ್ರೂ, ಪ್ರಜ್ಞೆ ತಪ್ಪಿದ್ದ ಹುಡುಗಿಯರ ಜೊತೆ ಯಾವತ್ತೂ ಇಲ್ಲ. ಏನು ಮಾಡೋದು ಅಂತ ಬಹಳ ಯೋಚಿಸಿದೆ, ನನ್ನ ತಪ್ಪನ್ನ ತಿದ್ದೋದಕ್ಕೆ ಯಾವ ದಾರಿ-ನೂ ಕಾಣಲಿಲ್ಲ. 'ಈ ಘಟನೆ ಆಗದೆ ಇದ್ದಿದ್ದರೆ...' ಅನ್ಕೊಂಡೆ. ತಕ್ಷಣ ನನಗೆ ಐಡಿಯಾ ಹೊಳೀತು. ಘಟನೆ ನಡೆದಿರೋದು ಗೊತ್ತಿರೋದು ನನಗೆ ಮತ್ತೆ ನಿಮಗೆ ಮಾತ್ರ (ನಿಮಗೂ ಗೊತ್ತಿರಲಿಲ್ಲ, ಆದ್ರೆ ಅದೇನೋ ಸಬ್-ಕಾನ್ಷಿಯಸ್ ಅಂತಾರಲ್ಲ, ಅಲ್ಲೆಲ್ಲೋ ಇದರ ಅರಿವಾಗಿರಬೋದು ಅಂತ ಅನ್ಕೊಂಡೆ). ನೀವು ಇದನ್ನ ಮರಿಯೋ ಹಾಗೆ ಮಾಡಿದ್ರೆ ಆಯ್ತಲ್ಲ ಅಂತ ಯೋಚಿಸಿದೆ. ನಾನು ಹೇಳಿದ ಹಾಗೆ, ಆ ಮನೆಯ ಒಂದು ಕೋಣೆ ಒಳಗೆ ಒಂದು ಸಣ್ಣ ಲ್ಯಾಬ್ ಮಾಡ್ಕೊಂಡಿದ್ರು, ನನ್ನ ಗೆಳೆಯ ಮತ್ತೆ ರಾಟ್ವೈಲರ್. ಅಲ್ಲಿದ್ದ ಒಂದು ಬೆಡ್ಡಲ್ಲಿ ನಿಮ್ಮನ್ನ ಮಲಗಿಸಿದೆ. ಅವರು ಪ್ರಯೋಗ ಮಾಡೋದನ್ನ ಎಷ್ಟೋ ಸಲ ನೋಡಿದ್ದೆ. ಅದೇ ಥರ, ಆ ಕೋಣೇಲಿದ್ದ ಯಂತ್ರಗಳನ್ನ ಬಳಸಿ ನಿಮ್ಮ ಮೆದುಳಲ್ಲಿದ್ದ ಎಲ್ಲಾದನ್ನೂ ಕಂಪ್ಯೂಟರ್-ಗೆ ಹಾಕಿದೆ. ನಿಮ್ಮ ಮೆದುಳು ವೈಪ್ ಆಯ್ತು. ಆದ್ರೆ ನಾನು ಏನೋ ತಪ್ಪು ಮಾಡಿರಬೇಕು, ಯಾಕಂದ್ರೆ ಕಂಪ್ಯೂಟರ್-ಇಂದ ನಿಮ್ಮ ತಲೆಗೆ ಅದೇನೋ ಡೇತಾ ಅಪ್ಲೋಡ್ ಆಗಕ್ಕೆ ಶುರುವಾಯ್ತು. ಅದು ಮುಗಿಯೋ ತನಕ ಏನು ಮಾಡಕ್ಕೂ ನಾನು ಧೈರ್ಯ ಮಾಡಲಿಲ್ಲ. ಅದಾದ ತಕ್ಷಣ, ಹೊರಗೆ ಮಳೆ ಕಮ್ಮಿ ಆಗಿರೋದು ನೋಡಿ ನಿಮ್ಮನ್ನ ಕರಕೊಂಡು ನಿಮ್ಮ ಮನೆ ಕಡೆ ಹೊರಟೆ. ಆದ್ರೆ ಅಶೋಕ ರಸ್ತೇಲಿ ಹೋಗ್ತಿದ್ದಾಗ ಪೋಲೀಸರ ಗಾಡಿಯೊಂದು ಕಾಣಿಸ್ತು. ಅದರಿಂದ ತಪ್ಪಿಸಿಕೊಂಡಾಗ ಇನ್ನೊಂದು ಬಂತು. ನನ್ನ ವಿಧಿ, ಸರಿಯಾಗಿ ಅದೇ ಬೀದೀಲಿ ಯಾವುದೋ ಡ್ರಗ್ ಮಾರೋನ ಮೇಲೆ ರೇಡ್ ಮಾಡೋದಕ್ಕೆ ಪೊಲೀಸರು ಅವತ್ತೇ ಬಂದಿದ್ರು. ಏನು ಮಾಡಕ್ಕೂ ತಲೆ ಓಡದೆ ನಿಮ್ಮನ್ನ ಅಲ್ಲೇ ಒಂದು ಮೋರಿ ಪಕ್ಕ ಮಲಗಿಸಿ ಅಲ್ಲಿಂದ ಓಡಿದೆ."

ಅಷ್ಟು ಹೇಳಿ ಮುಗಿಸಿದ ರಿಚರ್ಡ್-ನಿಗೆ ಹೆಗಲ ಮೇಲಿಂದ ದೊಡ್ಡ ಭಾರವೊಂದನ್ನು ಇಳಿಸಿದಂತೆ ಭಾಸವಾಯಿತು. ದೀರ್ಘ ಉಸಿರೊಂದನ್ನು ಎಳೆದು ತನ್ನ ವಿಧಿಯನ್ನು ಎದುರಿಸಲು ಸಿದ್ಧನಾಗಿ ಅವಳನ್ನು ನೋಡಿದ.
"ಈ ಪೆನ್ನುಗಳ ವಿಚಾರ ಏನು ಗೊತ್ತು ನಿಮಗೆ?" ಎಂದು 'ಎಟರ್ನಲ್ ಇಂಕ್ಸ್' ಪೆನ್ನೊಂದನ್ನು ಅವನಿಗೆ ತೋರಿಸಿದಳು.
"ಅದಾ? ನನ್ನ ಗೆಳೆಯನಿಗೆ ಆ ಪೆನ್ನು ಇಷ್ಟ ಅಂತ ನನಗೆ ಒಂದು ದಿನ ಗೊತ್ತಾಯ್ತು. ಅವತ್ತಿಂದ ಅವನಿಗೆ ಇದನ್ನ ಹುಟ್ಟಿದ ಹಬ್ಬಕ್ಕೆ ಪ್ರೆಸೆಂಟ್ ಮಾಡ್ತಿದ್ದೆ. ಈ ವರ್ಷವೂ ಹಾಗೇ. ಆದ್ರೆ ಈ ವರ್ಷ ರಾಟ್ವೈಲರ್-ಗೂ ಒಂದು ಪೆನ್ ಹೇಳಿದ್ದೆ."
"ರಾಟ್ವೈಲರ್ ಎಲ್ಲಿದಾನೆ ಈಗ?"

ರಿಚರ್ಡ್ ರಾಟ್ವೈಲರ್-ನ ಲ್ಯಾಬಿನ ಸಧ್ಯದ ವಿಳಾಸವನ್ನು ಆ 'ಎಟರ್ನಲ್' ಇಂಕಿನಲ್ಲೇ ಬರೆದು ಕೊಟ್ಟ. ಆ ಚೀಟಿಯನ್ನು ಜೇಬಿಗೆ ಸೇರಿಸಿದಳು.
"ಫಾದರ್, ನಿಮ್ಮ ತಪ್ಪೊಪ್ಪಿಗೆ ಕೇಳಿದೆ. ಫರ್ಗಿವ್ ಮೀ, ಐ ನೋ ನಾಟ್ ವಾಟ್ ಐ ಡೂ."

ರಿಚರ್ಡ್ ಅವಳನ್ನು ನೋಡಿದ.

***********************************************************

ಬೆಳಗಿನ ಆರು ಗಂಟೆ ಹೊತ್ತಿಗೆ ಚರ್ಚಿನ ಹೊರಾಂಗಣವನ್ನು ಸ್ವಚ್ಚ ಮಾಡುವುದು ನಾಗರಾಜನ ಕೆಲಸವಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದ ಅವನಿಗೆ ಚರ್ಚಿನ ಬಗ್ಗೆ ಬಹಳ ಗೌರವವಿತ್ತು. ತನ್ನ ಶಾಲಾ ವಿದ್ಯಾಭ್ಯಾಸಕ್ಕಾಗಿ ಚರ್ಚು ಎಷ್ಟೋ ಹಣ ನೀಡಿತ್ತು; ಕೃತಜ್ಞತೆಯಿಂದ ಚರ್ಚನ್ನು ಸ್ವಚ್ಚವಾಗಿಡುವ ಕೆಲಸವನ್ನು ನಾಗರಾಜ ಮಾಡುತ್ತಿದ್ದ. ಹೊರಗೆಲ್ಲ ಶುಚಿ ಮಾಡಿ ನಂತರ ಒಳಗಿನ ಕೆಲಸ. ದಿನವೂ ಆರು ಗಂಟೆಗೆ ಫಾದರ್ ಲೂಯಿಸ್ ಚರ್ಚಿನ ಬಾಗಿಲನ್ನು ತೆಗೆದು ಹೊರಗೆ ಬಂದು ಅವನನ್ನು ಮಾತನಾಡಿಸುತ್ತಿದ್ದರು. ನಂತರ ಒಳಗೆ ಹೋಗಿ ಬೆಂಚುಗಳನ್ನು, ನೆಲವನ್ನು ಒರೆಸುವುದು. ಬಾಗಿಲ ಬಳಿ ಹೋಗಿ ಫಾದರ್ ಲೂಯಿಸ್ ಬರುವುದನ್ನೇ ಕಾಯುತ್ತ ನಿಂತ ನಾಗರಾಜ. ಬಾಗಿಲು ತೆಗೆದೇ ಇರುವುದನ್ನು ಒಂದೆರಡು ನಿಮಿಷಗಳ ನಂತರ ಗಮನಿಸಿದ; ಆಶ್ಚರ್ಯದಿಂದ ಅದನ್ನು ತೆಗೆದು ಒಳಗೆ ಹೋದ. ಎಲ್ಲ ದೀಪಗಳೂ ಬೆಳಗುತ್ತಿದ್ದವು. ಹೊರಗಿನ ಕ್ಷೀಣ ಬೆಳಕನ್ನು ಸದೆಬಡಿದು ಒಳಗಿನ ವಿದ್ಯುದ್ದೀಪಗಳು ಚರ್ಚಿನ ಎಲ್ಲೆಡೆಯೂ ಬೆಳಕು ಚೆಲ್ಲುತ್ತಿದ್ದವು. ನೇರವಾಗಿ ಯೇಸುವಿನ ಮೂರ್ತಿಯ ಕಡೆ ನಾಗರಾಜನ ಗಮನ ಹಾರಿತು. ಅದನ್ನು ನೋಡಿದ್ದೇ ತಡ ಚೀರತೊಡಗಿದನು. ಹಾಗೇ ಕೂಗುತ್ತ ಹೊರಗೋಡಿದ.

ಯೇಸುವಿನ ಮೂರ್ತಿಯನ್ನು ಹೊತ್ತ ಬೃಹತ್ ಶಿಲುಬೆಯ ಮುಂದಿದ್ದ ಮಾನವ ಗಾತ್ರದ ಶಿಲುಬೆಯೊಂದರ ಮೇಲೆ, ಮೊಳೆಗಳಿಂದ ಇರಿಯಲ್ಪಟ್ಟು ಸಕಲ ರಂಧ್ರಗಳಿಂದ ರಕ್ತ ಕಾರುತ್ತ, ಆ ರಕ್ತದಿಂದಲೇ ಶಿಲುಬೆಯನ್ನೂ ನೆಲವನ್ನೂ ತೊಯ್ದು, ಫಾದರ್ ರಿಚರ್ಡ್ ಲೂಯಿಸ್-ರ ಮೃತದೇಹ ಭೀಷಣ ಸ್ವಾಗತ ಕೊರುತ್ತಿತ್ತು.

ಶನಿವಾರ, ಮೇ 14, 2011

ನೆನಪುಗಳ ಮಾತು ಮಧುರ -- ೭

(ಕಳೆದ ಭಾಗದಲ್ಲಿ:- 'ಎಟರ್ನಲ್ ಇಂಕ್ಸ್' ಫ್ಯಾಕ್ಟರಿಯಲ್ಲಿ ರಂಗಪ್ಪನೆಂಬ ಮನುಷ್ಯನಿಂದ ದೊರೆತ ಮಾಹಿತಿಯಿಂದ, ಅಳಿಸಲಾಗದ ಇಂಕಿನ ಪೆನ್ನನ್ನು ಕೊಂಡವರ ಪೈಕಿ ಭಾರತೀಯನು ಒಬ್ಬನೇ ಒಬ್ಬ ಇದ್ದಾನೆ ಎಂದು ತಿಳಿಯುತ್ತದೆ. ಅದೇ ಮಾಹಿತಿಯ ಪಟ್ಟಿಯಲ್ಲಿ ಅವನ ವಿಳಾಸವನ್ನು ನೋಡಿಕೊಂಡು ಅದ್ನಾನ್, ವೆಂಕಟ್ ಮತ್ತು ಅವಳು ಅಲ್ಲಿಗೆ ಹೋಗುತ್ತಾರೆ. ಆ ಭಾರತೀಯನ ನಿವಾಸ ಮೈಸೂರಿನ ಹೆಮ್ಮೆಯ ಫಿಲೋಮಿನಾ ಚರ್ಚು ಎಂಬುದನ್ನು ತಿಳಿದು ಅವರಿಗೆ ಅತ್ಯಾಶ್ಚರ್ಯವಾಗುತ್ತದೆ.)

ರಿಚರ್ಡ್ ಲೂಯಿಸ್-ನ ಬಾಲ್ಯ ಸಾಧಾರಣವಾಗಿಯೇ ಇತ್ತು. ತಾಯಿ-ತಂದೆ ಇಬ್ಬರೂ ಅಧ್ಯಾಪಕರು, ಮಗನೆಂದರೆ ಅಸಾಧ್ಯ ಪ್ರೀತಿಯುಳ್ಳವರು. ಹಲವು ವರ್ಷಗಳು ಅವನ ಜೀವನದಲ್ಲಿ ಯಾವ ವಿಚಿತ್ರ ಘಟನೆಗಳೂ ಘಟಿಸಲಿಲ್ಲ. ರಿಚರ್ಡ್ ಹತ್ತು ವರ್ಷದ ಹುಡುಗನಾಗಿದ್ದಾಗ ಅದಾವುದೋ ಸಂಬಂಧಿಕರ ಮದುವೆಗೆ ಮದ್ರಾಸಿಗೆ ಹೋಗಬೇಕಾಗಿ ಬಂದಿತು. ಮದ್ರಾಸಿನ ಸೆಂಟ್ರಲ್ ಸ್ಟೇಷನ್ನಿನಿಂದ ಮದುವೆ ಮನೆಗೆ ಹೋಗಲು ಅಲ್ಲಿಯ ಲೋಕಲ್ ರೈಲೊಂದನ್ನು ಏರಿ ಹೋಗಬೇಕಿತ್ತು. ಉತ್ಸಾಹದಿಂದ ಮುಂದೆ ಓಡುತ್ತಿದ್ದ ರಿಚರ್ಡ್-ನನ್ನು ತಂದೆ-ತಾಯಿಗಳಿಬ್ಬರೂ ಹಿಡಿಯಲು ಪ್ರಯತ್ನಿಸುವಂತೆ ನಟಿಸುತ್ತಿದ್ದರು. ಈ ಆಟದಲ್ಲೇ ಮುಳುಗಿದ್ದ ಹುಡುಗ ವೇಗವಾಗಿ ಓಡಿದ; ಹಾಗೆ ಓಡುತ್ತ ಅವರು ಕೂಗಿದರೂ ಕೇಳದಷ್ಟು ದೂರ ಹೋದ. ತಿರುಗಿ ನೋಡಿದಾಗ ಅವರಿಬ್ಬರೂ ಅವನತ್ತ ಕೈಯಾಡಿಸುತ್ತಿದ್ದುದು ಕಂಡು ನಕ್ಕ. ಮತ್ತೆ ಓಡಲು ತಯಾರಾದ ಹುಡುಗನಿಗೆ "ರಿಚರ್ಡ್, ತಡಿ, ಓಡಬೇಡ" ಎಂದು ಯಾರೋ ಅಂದದ್ದು ಕೇಳಿಸಿತು. ಹತ್ತಿರದಿಂದಲೇ ಬಂದ ಧ್ವನಿ, ಅಪರಿಚಿತವಾದದ್ದು; ಆದರೂ ಆ ಮಾತಾಡಿದವರಿಗೆ ತನ್ನ ಹೆಸರು ಹೇಗೋ ತಿಳಿದಿತ್ತು. ಯಾರು ಎಂದು ನೋಡಲು ತಿರುಗಿದ; ಮರುಕ್ಷಣವೇ ಅವನ ಮುಂದೆ ಒಂದು ರೈಲು ಬಿರುಗಾಳಿಯ ವೇಗದಿಂದ ಹೋಯಿತು. ತಾನು ಮುಂದೆ ಹೋಗಿದ್ದರೆ ಇಷ್ಟು ಹೊತ್ತಿಗೆ ರೈಲಿನ ಚಕ್ರಗಳಿಗೆ ಸಿಕ್ಕು ಕಲ್ಲುಗಳ ಜೊತೆ ಬೆರೆತು ಹೋಗುತ್ತಿದ್ದ. ಗಾಬರಿಯಿಂದ ಒಂದೆರಡು ಹೆಜ್ಜೆ ಹಿಂದೆ ಹಾಕಿ ತನ್ನ ಜೀವ ಉಳಿಸಿದವರು ಯಾರು ಎಂದು ಹುಡುಕಾಡಿದ; ಯಾರೂ ಕಾಣಿಸಲಿಲ್ಲ. ದೂರದಿಂದ ಅವನ ಕಡೆಗೆ ತಂದೆ-ತಾಯಿ ಓಡಿ ಬರುತ್ತಿದ್ದರು. ಅವರು ಬಂದು ಅವನನ್ನು ಎತ್ತಿಕೊಂಡು, ಬೈದು, ಮುದ್ದಾಡಿದರೂ ರಿಚರ್ಡ್ ಮಾತ್ರ ಆ ಧ್ವನಿಯನ್ನು ಬಿಟ್ಟು ಬೇರೆ ಯೋಚನೆಯನ್ನು ಮಾಡಲೇ ಇಲ್ಲ.

ಆ ಅನುಭವ ಸಣ್ಣ ಹುಡುಗನ ಮೇಲೆ ಬಹಳ ಪ್ರಭಾವ ಬೀರಿತು. ತನ್ನನ್ನು ಕಾಪಾಡಿದ ಆ ಅಶರೀರ ವಾಣಿ ಯಾರದು? ಭೂತವೇ? ಪ್ರೇತವೇ? ಎಲ್ಲ ಬಲ್ಲ ಆ ಭಗವಂತನೇ? ತನ್ನನ್ನು ಉಳಿಸಿದ್ದಾದರೂ ಏಕೆ? ತಾನು ಯಾವುದೋ ಮಹತ್ಕಾರ್ಯಸಾಧನೆಗಾಗಿ ಹುಟ್ಟಿರಬಹುದೇ? ಚಿಕ್ಕ ವಯಸ್ಸಿನಿಂದ ಬೈಬಲ್ಲಿನಲ್ಲಿದ್ದ ಸಂತ-ಸಜ್ಜನರ ಕತೆಗಳನ್ನು ಕೇಳುತ್ತ ಬಂದ ರಿಚರ್ಡ್, ಆ ಕತೆಗಳಲ್ಲಿನ ಪವಾಡಗಳ ಬಗ್ಗೆ ಆಶ್ಚರ್ಯಗೊಂಡಿದ್ದ. ಯೇಸು ಕುರುಡರಿಗೆ ಕಣ್ಣು ಕೊಟ್ಟಿದ್ದು, ಕುಷ್ಠ ರೋಗಿಗಳನ್ನು ಗುಣಪಡಿಸಿದ್ದು, ಸತ್ತವನನ್ನು ಬದುಕಿಸಿದ್ದು ಮುಂತಾದ ಪವಾಡಗಳಂತೆ ಇದೂ ಒಂದು ಪವಾಡವೇ ಸರಿ, ಆ ದೇವನೇ ತನಗೆ ನೀಡಿದ ಒಂದು ಸಂಜ್ಞೆ ಎಂದು ನಿಶ್ಚಯಿಸಿದ. ಭಕ್ತ ತಂದೆಯಿದ್ದರೂ ಸಂದೇಹಾವಾದಿಯಾದ ತನ್ನ ತಾಯಿಯ ವಿಚಾರಧಾರೆಯತ್ತಲೇ ವಾಲುತ್ತಿದ್ದ ಸಣ್ಣ ಹುಡುಗ ಇದ್ದಕ್ಕಿದ್ದಂತೆ ತಂದೆಯ ಕಡೆ ಸೇರಿದ. ಪ್ರತಿ ಭಾನುವಾರವೂ ಚರ್ಚಿಗೆ ಹೋಗಲಾರಂಭಿಸಿದ. ಎಲ್ಲರಿಗಿಂತಲೂ ಹೆಚ್ಚು ಹೊತ್ತು ಪ್ರಾರ್ಥನೆಯಲ್ಲಿ ಮಗ್ನನಾಗಿರುತ್ತಿದ್ದ. ಪಾದ್ರಿಗಳೊಡನೆ ಚರ್ಚೆ ನಡೆಸುತ್ತ, ಚರ್ಚಿನ ವಿವಿಧ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುತ್ತ, ಶಿಲುಬೆಗೇರಿಸಿದ್ದ ಯೇಸುವಿನ ಮೂರ್ತಿಯನ್ನು ಕಂಡಾಗ ಆತನನುಭವಿಸಿದ ಬಾಧೆ-ಬವಣೆಗಳನ್ನು ನೆನೆದು ಅಳುತ್ತ, ಆತನ ಸಂದೇಶವನ್ನು ಸಾರುತ್ತ, ಸಹಾಯ ಕೋರಿದವರಿಗೆ ಸಹಾಯ ಮಾಡುತ್ತ, ಕೇವಲ ಕ್ರೈಸ್ತಾನುಯಾಯಿಯಾಗದೆ ಕ್ರಿಸ್ತನಂತೆಯೇ ಆದ. ತನ್ನ ಹದಿನಾರನೆಯ ವಯಸ್ಸಿನಲ್ಲಿ, ತಂದೆ-ತಾಯಿಗಳ ಬೇಡಿಕೆ-ಬೆದರಿಕೆಗಳನ್ನು ಕಿವಿಗೆ ಹಾಕಿಕೊಳ್ಳದೆ, ಸಂಸಾರವನ್ನು ಬಿಟ್ಟು ಪಾದ್ರಿಯಾಗಬೇಕೆಂದು ನಿರ್ಧರಿಸಿ ಫಿಲೋಮಿನಾ ಚರ್ಚನ್ನು ಸೇರಿದ.

ಚರ್ಚಿಗೆ ಬರುತ್ತಿದ್ದ ತನ್ನ ಪೋಷಕರನ್ನು ಕಂಡು ರಿಚರ್ಡ್ ಲೂಯಿಸ್ ಸಂತೋಷ ಪಡುತ್ತಿದ್ದ. ಆದರೆ ಮನೆಗೆ ಹಿಂದಿರುಗಬೇಕೆಂಬ ಅವರ ಕೋರಿಕೆಗೆ ಓಗೊಡುತ್ತಿರಲಿಲ್ಲ. ತನ್ನನ್ನು ಉಳಿಸಿದ ಭಗವಂತ ತನ್ನ ಬದುಕಿನ ಉದ್ದೇಶವನ್ನು, ಧ್ಯೇಯವನ್ನು ತನಗೆ ವಿವರಿಸುವ ವರೆಗೆ ಮನೆಗೆ ಹಿಂದಿರುಗುವುದಿಲ್ಲವೆಂದ. "ಅಷ್ಟು ವಿಶೇಷವೇ ನೀನು? ನಿನ್ನೊಬ್ಬನ ಬದುಕಿಗೆ ಮಾತ್ರ ಧ್ಯೇಯ ಇರಬೇಕಾ? ಭಗವಂತ ನಿನ್ನನ್ನ ಮಾತ್ರ ಕರೆದು ಅದನ್ನ ಹೇಳಬೇಕಾ? ಭಗವಂತನಿಗೆ ಬೇರೆ ಕೆಲಸ ಇಲ್ವಾ, ಮನುಷ್ಯರ ಜೀವನದಲ್ಲಿ ನುಸುಳಿಕೊಳ್ಳೋದು ಬಿಟ್ಟು?" ಎಂದು ಆತನ ತಾಯಿ ಪ್ರಶ್ನಿಸಿದಾಗ ರಿಚರ್ಡ್ ನಕ್ಕು ಸುಮ್ಮನಾದ. 'ತನ್ನನ್ನು ರೈಲಿನಡಿಯೇ ಸಾಯಲು ಬಿಡಬಹುದಾಗಿತ್ತಾದರೂ ಆ ಧ್ವನಿ ತನ್ನನ್ನು ತಡೆದಿತ್ತು, ಆದ್ದರಿಂದ ತನ್ನ ಜೀವನಕ್ಕೆ ಏನೋ ಅರ್ಥವಿದೆ. ಈ ಸಂದೆಹಾವಾದಿಗಳಿಗೆ ಅದು ಅರ್ಥವಾಗುವುದಿಲ್ಲ' ಎಂದುಕೊಂಡ. ಮಗನಿಂದ ದೂರವಿರುವ ತಂದೆ-ತಾಯಿಯ ನೋವು ಅರ್ಥ ಮಾಡಿಕೋ ಎಂದು ಅವರು ಹೇಳಿದರೆ 'ಒಂದಲ್ಲ ಒಂದು ದಿನ ಎಲ್ಲರೂ ಎಲ್ಲರಿಂದಲೂ ದೂರವಾಗಲೇ ಬೇಕು. ಭಗವಂತನ ಕೃಪೆಯೊಂದೇ ಶಾಶ್ವತ' ಎಂದು ಹೇಳಿ ಅವರ ಯಾವ ಬೇಡಿಕೆಗೂ, ವಿನಂತಿಗೂ, ಬೆದರಿಕೆಗೂ ಅಂಜದೆ ಪಾದ್ರಿಯಾಗಿಯೇ ಉಳಿದುಕೊಂಡ. ಹಾಗೆಯೇ ಹಲವು ವರ್ಷಗಳು ಸಾಗಿದವು.

ಕ್ರಮೇಣ, ಎಷ್ಟೋ ಮನುಷ್ಯರಂತೆ ರಿಚರ್ಡ್-ನಿಗೂ ಐವತ್ತು ವರ್ಷಗಳು ತುಂಬಿದವು. ಹೊರಗಿನ ಪ್ರಪಂಚ ಎಷ್ಟು ಬದಲಾವಣೆಗಳು ಕಂಡರೂ ಫಿಲೋಮಿನಾ ಚರ್ಚು ಮಾತ್ರ ಹಾಗೇ ಉಳಿದಿತ್ತು. ರಿಚರ್ಡ್-ನಿಗೆ ಚರ್ಚಿನ ಆ ಸ್ಥಿರತೆ, ಬದಲಾಗದ ಗುಣ ಬಹಳ ಶಾಂತಿದಾಯಕವಾಗಿತ್ತು. ಹೊರಗೆ, ನೆಲದಡಿಯಿಂದ ಉದ್ಭವಿಸಿ ಆಗಸದವರೆಗೂ ಮೈ ಚಾಚುವ ಗಾಜು-ಕಬ್ಬಿಣಗಳ ಕೋಟೆಗಳು ಎಷ್ಟೇ ಹುಟ್ಟಿಕೊಂಡರೂ, ಸುಮಾರು ಒಂದು ಶತಮಾನ ಹಳೆಯ ಆ ಚರ್ಚಿನೊಳಗೆ ಅದಾವುದರ ಪರಿವೆಯೂ ಅವನಿಗೆ ಅಷ್ಟು ಇರಲಿಲ್ಲ. ಆ ಭಗವದಾಲಯದ ಒಳಗೇ ಎಲ್ಲ ಸಂತೋಷವನ್ನೂ ಕಂಡುಕೊಂಡ. ಆಗಾಗ್ಗೆ ಬಂದು ಹೋಗುತ್ತಿದ್ದ ವ್ಯಕ್ತಿಗಳು ಅವನಿಗೆ ಚಿರ ಪರಿಚಿತರಾದರು. ಅವರೇ ಅವನಿಗೆ ಬಂಧು-ಬಳಗವಾದರು.

ಹಾಗಿರುವಾಗ, ಆ ಸಾಯಂಕಾಲ ತನ್ನ ಬಳಗದಲ್ಲಿ ಒಂದಿಬ್ಬರು ಆಡಿದ ರೀತಿ ಅವನಿಗೆ ಬಹಳ ವಿಚಿತ್ರವೆನಿಸಿತು. ಆರು ಗಂಟೆಯ ಹೊತ್ತಿಗೆ, ಕತ್ತಲಾವರಿಸುವ ಮುನ್ನ, ಚರ್ಚಿನ ಹೊರಗಿನ ಬಾಗಿಲುಗಳ ದೀಪಗಳನ್ನು ಹೊತ್ತಿಸುವುದು ರಿಚರ್ಡ್-ನ ವಾಡಿಕೆ. ಅದನ್ನು ತಾನೇ ಮಾಡುತ್ತಿದ್ದ. ಆ ಸಮಯಕ್ಕೆ ಪರಿಚಿತರು ಹಲವರು ಬಂದು ಮಾತನಾಡಿಸುತ್ತಿದ್ದರು (ಪರಧರ್ಮ ಅನುಯಾಯಿಗಳೂ ಕೂಡ); ಇಂದೂ ಹಾಗೇ ಆಗಿತ್ತು. ಹಿಂದೂ-ಮುಸಲ್ಮಾನರಿಬ್ಬರು ಬಂದು ತನ್ನನ್ನು ಚನ್ನಾಗಿಯೇ ಮಾತನಾಡಿಸುತ್ತಿದ್ದರು. ಮೈಸೂರಿನ ಬೆಳವಣಿಗೆ, ವ್ಯಾಪಾರ ವಲಯ ಹೇಗೆ ಚರ್ಚಿನ ಬಾಗಿಲ ವರೆಗೂ ವ್ಯಾಪಿಸಿತ್ತು, ಮಾನವನ ಬದುಕಿನ ಅರ್ಥ/ಅರ್ಥ ಹೀನತೆ, ಮುಂತಾದ ವಿಷಯಗಳ ಮಾತಾಗುತ್ತಿತ್ತು. ಇದ್ದಕ್ಕಿದ್ದ ಹಾಗೆ ತನ್ನ ಹಿಂದಿನಿಂದ ಯಾರೋ ಬಂದು ತಲೆಗೂದಲೊಂದನ್ನು ಜೋರಾಗಿ ಎಳೆದು ಕಿತ್ತರು. ಆಶ್ಚರ್ಯ, ನೋವುಗಳಿಂದ ರಿಚರ್ಡ್ ಚೀರಿದ; ಆದರೆ ತನ್ನ ಜೊತೆ ಮಾತನಾಡುತ್ತಿದ್ದ ಇಬ್ಬರೂ ತನಗೆ ಯಾವ ಸಹಾಯವೂ ಮಾಡದೆ ಕೂದಲು ಕಿತ್ತವರ ಕಡೆಯೇ ನೋಡುತ್ತ ನಿಂತಿದ್ದರು. ಯಾರೆಂದು ರಿಚರ್ಡ್ ತಿರುಗಿ ನೋಡುವಷ್ಟರಲ್ಲಿ ಅಲ್ಲಿ ಯಾರೂ ಇರಲೇ ಇಲ್ಲ. ತಲೆಯುಜ್ಜಿಕೊಳ್ಳುತ್ತ  ಆ ಇಬ್ಬರನ್ನೇ ಈಗ ನಡೆದದ್ದೇನು ಎಂದು ಕೇಳೋಣವೆಂದಾಗ ಅವರಿಬ್ಬರೂ ಅವನಿಗೆ ಅವಸರವಾಗಿ ವಿದಾಯ ಹೇಳಿ ಹೊರಟರು. 'ಇದಕ್ಕೇನು ಅರ್ಥ? ಭಗವಂತ, ನನ್ನ ಬದುಕಿನ ಅರ್ಥ ಏನು ಅಂತ ಇನ್ನೂ ಹೇಳಿಲ್ಲ. ಹೋಗಲಿ, ಇದರ ಅರ್ಥವಾದರೂ ಹೇಳಪ್ಪ' ಎಂದು ಮನಸ್ಸಿನಲ್ಲೇ ಕೇಳಿಕೊಂಡ.

***************************************************************************

'ಢಣ್!!' ಎಂದು ಸತತವಾಗಿ ಹತ್ತು ಸಲ ಹೊಡೆದುಕೊಂಡು ಚರ್ಚಿನ ಮೇಲಿದ್ದ ಗಂಟೆ ರಾತ್ರಿಯ ಸಮಯ ಸೂಚಿಸಿತು. ಯೇಸುವಿನ ಮೂರ್ತಿಯ ಸಮೀಪದಲ್ಲೇ ಇದ್ದ ಒಂದು ಕೋಣೆಯಲ್ಲಿ ಕುಳಿತು ಸಂತ ಆಗಸ್ಟೀನನ "ಕನ್ಫೆಶನ್ಸ್" ಓದುತ್ತಿದ್ದ ಫಾದರ್ ರಿಚರ್ಡ್ ಮಲಗುವ ನಿರ್ಧಾರ ಮಾಡಿ ಮೇಜಿನ ಮೇಲಿದ್ದ ದೀಪವನ್ನು ಆರಿಸಲು ಕೈ ಚಾಚಿದ. ಆಗ ಚರ್ಚಿನ ಮುಖ್ಯ ಬಾಗಿಲನ್ನು ಯಾರೋ ತಟ್ಟಿದ ಶಬ್ದವಾಯಿತು. ಈ ಕಗ್ಗತ್ತಲೆಯ ವೇಳೆಯಲ್ಲಿ ಯಾರಿರಬಹುದು ಎಂದು ಯೋಚಿಸುತ್ತ, ಬಹುಷಃ ಭ್ರಮೆಯಿರಬಹುದೇನೋ ಎಂದು ದೀಪ ಆರಿಸಿ ಅಲ್ಲೇ ಇದ್ದ ಸಣ್ಣ ಮಂಚದ ಮೇಲೆ ಮಲಗಿದ. ಮರುಕ್ಷಣವೇ ಮತ್ತೆ ಬಾಗಿಲು ತಟ್ಟಿದ ಶಬ್ದ. ಸ್ವಲ್ಪ ಅಸಹನೆಯಿಂದಲೇ ಎದ್ದು ರಿಚರ್ಡ್ ಬಾಗಿಲಿನತ್ತ ನಡೆದು "ಯಾರು?" ಎಂದು ಕೇಳಿದ. "ಫಾದರ್, ನಾನು ಕನ್ಫೆಸ್ ಮಾಡ್ಕೋಬೇಕು. ದೊಡ್ಡ ತಪ್ಪು ಮಾಡಿದಿನಿ, ದಯವಿಟ್ಟು ನನ್ನ ಮಾತು ಕೇಳಿ" ಎಂದಿತು ಒಂದು ಧ್ವನಿ. ಭಯ ಮಿಶ್ರಿತವಾದ ಸ್ತ್ರೀ ಕಂಠ. "ಹಾಳುಬಿದ್ದ ಈ ಹೊತ್ತಿನಲ್ಲಿ ನಿನ್ನದೆಂಥ ತಪ್ಪೊಪ್ಪಿಗೆ? ನನ್ನ ಈಗ ಎಬ್ಬಿಸಿದ್ದೇ ದೊಡ್ಡ ತಪ್ಪು, ಅದನ್ನ ಕ್ಷಮಿಸಿದೀನಿ. ಹೋಗತ್ಲಾಗೆ!" ಎಂದು ಇತರ ಪಾದ್ರಿಗಳು ಬಹುಶಃ ಬೈದು ಕಳಿಸುತ್ತಿದ್ದರೇನೋ; ಆದರೆ ಕುತೂಹಲ ಕೆರಳಿದ ರಿಚರ್ಡ್-ನಿಗೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಬಾಗಿಲಿಗೆ ಹಾಕಿದ್ದ ದೊಡ್ಡ ಅಗಣಿಯನ್ನು ತೆಗೆದ.

ಕಪ್ಪು. ಮೇಲಿಂದ ಕೆಳಗಿನ ವರೆಗೂ ಕಪ್ಪು. ಬಟ್ಟೆ, ಪಾದರಕ್ಷೆಗಳಷ್ಟೇ ಅಲ್ಲ, ಕೈಯಲ್ಲಿದ್ದ ಪಿಸ್ತೂಲು ಕೂಡ. ಆ ಪಿಸ್ತೂಲು ತನ್ನ ಕಡೆಯೇ ಗುರಿಯಿಟ್ಟಿದ್ದನ್ನು ಕಂಡು ಎರಡು ಹೆಜ್ಜೆ ಹಿಮ್ಮೆಟ್ಟಿದ ರಿಚರ್ಡ್. ಅವಳು ಕೂಡ ಚರ್ಚಿನೊಳಗೆ ಬಂದು ತನ್ನ ಹಿಂದೆ ಬಾಗಿಲನ್ನು ಭದ್ರವಾಗಿ ಹಾಕಿದಳು. ಕನ್ಫೆಷನ್ ಬೂಥ್-ನತ್ತ ಅವನನ್ನು ಕರೆದೊಯ್ದು ಅದರೊಳಗೆ ಹೋಗಲು ಸೂಚಿಸಿದಳು. ಆದರೆ ಸಾಮಾನ್ಯವಾಗಿ ಪಾದ್ರಿ ಕೂರುವ ಸ್ಥಳದಲ್ಲಲ್ಲ, ತಪ್ಪೊಪ್ಪಿಕೊಳ್ಳುವ ಭಕ್ತರು ಕೂರುವ ಕಡೆ ಕೂರುವಂತೆ ಕೈ ಮಾಡಿದಳು. ಪಾದ್ರಿಯ ಸ್ಥಳದಲ್ಲಿ ತಾನು ಕುಳಿತು ಅವನನ್ನೇ ನೋಡಿದಳು. ಇಬ್ಬರ ನಡುವೆ ಪರದೆ ಇದ್ದರೂ ತನ್ನ ಕಡೆ ಗುರಿಯಿಟ್ಟಿದ್ದ ಪಿಸ್ತೂಲು ರಿಚರ್ಡ್-ನಿಗೆ ಕಾಣುತ್ತಿತ್ತು. ಒಂದೆರಡು ಕ್ಷಣ ಯಾರೂ ಮಾತಾಡಲಿಲ್ಲ.

"ಹೇಳಿ, ಫಾದರ್, ನಿಮ್ಮ ತಪ್ಪೆಲ್ಲ ಒಪ್ಕೋತೀರಾ?"

ಭಾನುವಾರ, ಮೇ 1, 2011

ನೆನಪುಗಳ ಮಾತು ಮಧುರ -- ೬

(ಕಳೆದ ಭಾಗದಲ್ಲಿ: ತನ್ನನ್ನು ಯಾರೋ ಮೈಸೂರಿನ ಅಶೋಕ ರಸ್ತೆಯಲ್ಲಿ ಎಸೆದು ಹೋಗಿದ್ದಾರೆಂದು ತಿಳಿದ ಅವಳು, ಅವರನ್ನು ಹುಡುಕಲೆತ್ನಿಸುತ್ತಾಳೆ. ಆ ಘಟನೆ ನಡೆದಂದು ತನ್ನ ಜೇಬಿನಲ್ಲಿದ್ದ ಒಂದು ಚೀಟಿಯನ್ನು ಅದ್ನಾನ್ ಮತ್ತು ವೆಂಕಟ್ ಹುಡುಕಿದ್ದು, ಅದರಲ್ಲಿದ್ದ ಚಿತ್ರ ಮಳೆನೀರಿನಿಂದ ಅಳಿಸಿ ಹೋಗದಂತಹ ವಿಶೇಷ ಇಂಕಿನಿಂದ ಬರೆಯಲ್ಪಟ್ಟಿತ್ತು ಎಂದು ಅವರಿಗೆ ತಿಳಿಯುತ್ತದೆ. ಆ ಇಂಕಿನ ತಯಾರಕರು 'ಎಟರ್ನಲ್ ಇಂಕ್ಸ್' ಎಂಬ ಸಂಸ್ಥೆ ಎಂದು ತಿಳಿದುಕೊಂಡು, ಅದರ ಫ್ಯಾಕ್ಟರಿಯತ್ತ ಹೊರಡುತ್ತಾರೆ...)

ವ್ಯಾಪಾರ ವಲಯದ ಹೊರಗೂ ಒಂದು ಮೈಸೂರಿದೆಯೆಂದು ತಿಳಿಯುವುದು ಹುಣಸೂರು ರಸ್ತೆಯ ಮೇಲೆ ಹೋಗುವ 'ವೆಸ್ಟ್ ಲೈನ್' ಮೆಟ್ರೋ ರೈಲನ್ನು ಏರಿದಾಗ. ಸರಸ್ವತಿಪುರ, ಕುಕ್ಕರಹಳ್ಳಿ ಕೆರೆಗಳನ್ನು ಬಳಸಿಕೊಂಡು ಬಂದು ಆದಿಕಾಲದಿಂದಲೂ ಧನವಂತರ ನಿವಾಸಗಳಿಂದಲೇ ತುಂಬಿದ್ದ ಜಯಲಕ್ಷ್ಮಿಪುರಕ್ಕೆ ಭೇಟಿ ನೀಡಿ ನಂತರ ಹುಣಸೂರು ರಸ್ತೆಯನ್ನು ಸೇರುವ ಈ ರೈಲಿನಲ್ಲಿ ಪ್ರಯಾಣ ಮಾಡುವುದು ಒಂದು ಕಾಲದಲ್ಲಿ ಸುಖಕರವಾಗಿತ್ತು. ವ್ಯಾಪಾರ ವಲಯ ಜನರನ್ನು, ಅವರ ಹಣವನ್ನು ನುಂಗುತ್ತ ಬಂದಾಗ ಈ ಹೊರಗಿನ ಮೈಸೂರಿನ ಸೊಬಗು ಇಳಿಮುಖವಾಗುತ್ತ ಬಂದಿತು. ಈಗ ಆ ಮಾರ್ಗದಲ್ಲಿ ಕಾಣುವುದೆಲ್ಲ ಅನಿವಾರ್ಯವಾಗಿ ಗುಡಿಸಲುಗಳಲ್ಲಿ ಬಾಳುವ ದುರ್ವಿಧಿವಶರು, ಕಸ, ಕೊಳೆ, ಬಡತನ. ಅಲ್ಲಿ ಸೂರ್ಯಾಸ್ತದ ನಂತರ ಒಬ್ಬೊಬ್ಬರೇ ಓಡಾಡುವುದು ಒಳಿತಲ್ಲವೆಂದು ಪ್ರವಾಸಿಗರಿಗೆ ಮೈಸೂರಿಗರು ಹೇಳುತ್ತಿದ್ದರು. ಹಾಗೆ ಹೋದ ಹಲವರು ಇನ್ನೂ ಅಲ್ಲೇ ಇದ್ದಾರೆ ಅಥವಾ ಕಣ್ಮರೆಯಾಗಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಹುಣಸೂರು ರಸ್ತೆಯಲ್ಲಿ ಹೋಗಹೊಗುತ್ತ ಸಿಗುವ "ಸುಂದರಪುರ" ಎಂಬ ಹೊಸ ಬಡಾವಣೆಯೊಂದು ರೈಲಿನ ಕೊನೆಯ ನಿಲ್ದಾಣವಾಗಿತ್ತು. ಅಲ್ಲಿಗೆ ಅನತಿದೂರದಲ್ಲಿ 'ಎಟರ್ನಲ್ ಇಂಕ್ಸ್' ಫ್ಯಾಕ್ಟರಿಯಿತ್ತು.

"ಹಳೆಯ ಕಾಲದಲ್ಲಿ" ಎನ್ನುವ ಬದಲು "ಓಬಿರಾಯನ ಕಾಲದಲ್ಲಿ" ಎಂದು ಹೇಳುವ ವಾಡಿಕೆ ಹಲವರಿಗಿದೆ. ಆ ಓಬಿರಾಯನೇ 'ಹಳೆಯ ಕಾಲದ್ದು' ಎನ್ನುವಷ್ಟು ಪ್ರಾಚೀನ ಕಟ್ಟಡ. ಮುಟ್ಟಿದರೆ ಎಲ್ಲಿ ಮುರಿದು ಬೀಳುವುದೋ ಎಂಬ ಹೆದರಿಕೆ ಮೂಡಿಸುವಷ್ಟು ಸೂಕ್ಷ್ಮವಾಗಿ ಕಾಣುವ ಕಿಟಕಿ-ಬಾಗಿಲುಗಳು. ಕಟ್ಟಡದ ಒಳಗೆ ಏರಿ ಇಳಿಯಲು ಧೂಳು ಕವಿದ ಮೆಟ್ಟಿಲುಗಳು. ನೋಡಿದರೆ ಯಾರಿಗೂ ಹೇಸಿಗೆಯಾಗದೆ ಇರುತ್ತಿರಲಿಲ್ಲ. ಇಂಥ ವಾತಾವರಣದಲ್ಲೂ ಆ ಕಟ್ಟಡದೊಳಗೆ ಕೆಲಸ ನಡೆಯುತ್ತಿತ್ತು. ಬೃಹದ್ಯಂತ್ರಗಳನ್ನು ಚಲಾಯಿಸುತ್ತ, ಒಂದರಿಂದ ಮತ್ತೊಂದಕ್ಕೆ ಏನನ್ನೋ ಒಯ್ಯುತ್ತ ಹಲವರು ಓಡಾಡುತ್ತಿದ್ದರು. ಅವರಲ್ಲಿ ಒಬ್ಬನನ್ನು ತಡೆದು ಕಾರ್ಖಾನೆಯ ಮುಖ್ಯಸ್ಥನಾರೆಂದು ಅದ್ನಾನ್ ವಿಚಾರಿಸಿದ.

ಆ ಪಾಳುಬಿದ್ದ ಕಟ್ಟಡಕ್ಕಿಂತಲೂ ಪಾಳುಬಿದ್ದ ಒಂದು ಕೊಠಡಿ. ಅದರಲ್ಲಿ ಕುಳಿತಿದ್ದ ಮುದುಕನನ್ನು ವೆಂಕಟ್ "ರಂಗಪ್ಪನವರು ನೀವೇ-ನಾ?" ಎಂದು ಕೇಳಿದ. ಏನೋ ಬರೆಯುತ್ತಿದ್ದ ಆತ ತಲೆಯೆತ್ತಿ ಅವರನ್ನು ನೋಡಿ, ಕನ್ನಡಕವನ್ನು ಒಮ್ಮೆ ಒರೆಸಿಕೊಂಡು ಮತ್ತೊಮ್ಮೆ ದಿಟ್ಟಿಸಿ ನೋಡಿದ.
"ಹೌದು. ಯಾರು ನೀವು? ಏನು ಬೇಕಿತ್ತು?" ಎಂದು ತಪೋಭಂಗವಾದ ಋಷಿಯಂತೆ ಕೇಳಿದ ಆತ.
"ನಾನು ವೆಂಕಟ್ ಅಂತ. ನಿಮ್ಮ ಕಂಪನಿಯ ಪೆನ್ನುಗಳ ಬಗ್ಗೆ ಕೇಳಬೇಕಿತ್ತು."
"ಈ ವರ್ಷದ್ದೆಲ್ಲ ಮುಗಿದಿದೆ. ಮುಂದಿನ ವರ್ಷಕ್ಕೆ ಈಗ ತಾನೇ ಶುರು ಮಾಡಿದೀವಿ. ಹೋಗಿ ಹೋಗಿ, ಇನ್ನು ಆರು ತಿಂಗಳಾದಮೇಲೆ ಬನ್ನಿ."
"ಅದಲ್ಲ, ಈ ವರ್ಷ ನೀವು ಪೆನ್ನುಗಳನ್ನ ಯಾರಿಗೆ ಮಾರಿದೀರ ಅಂತ ತಿಳ್ಕೋಬೇಕಿತ್ತು..."
"ಅವೆಲ್ಲ ಬಂದೋರಿಗೆಲ್ಲ ಹೇಳಕ್ಕಾಗಲ್ಲ. ಒಂದೊಂದು ಪೆನ್ನಿಗೂ ಎಷ್ಟು ಬೆಲೆ ಗೊತ್ತಾ? ದಾರಿ ನೋಡಿ. ನನ್ನ ಕೆಲಸ ಮಾಡಕ್ಕೆ ಬಿಡಿ."
"ಅಲ್ಲ, ನೀವು..."
"ಹೊರಡಿ, ಸ್ವಾಮೀ! ಟೈಮ್ ಆಯ್ತು. ನನ್ನ ತಲೆನೋವು ನಂಗೆ. ಥೂ, ಬೆಳಗ್ಗೆ ಎದ್ದು ಯಾರ ಮುಖ ನೋಡಿ ಎದ್ದೆನೋ ಏನೋ!"

ಅದ್ನಾನ್ ಆಗಲಿ ವೆಂಕಟ್ ಆಗಲಿ ಬೇರೊಂದು ಮಾತಾಡುವ ಮೊದಲೇ ಅವಳು ಮುದುಕನನ್ನು ಶರ್ಟಿನ ಪಟ್ಟಿ ಹಿಡಿದು ಕುರ್ಚಿಯಿಂದೆಳೆದು ನಿಲ್ಲಿಸಿದಳು. ಇದ್ದಕಿದ್ದಂತೆ ತನ್ನ ಮೇಲಾದ ಈ ಬಲಪ್ರಯೋಗದಿಂದ ಹೆದರಿದ ರಂಗಪ್ಪ ಭಯದಿಂದ ಅವಳನ್ನೇ ನೋಡುತ್ತ ನಿಂತ. ಅವನು ನೋಡುತ್ತಿದ್ದಂತೆಯೇ ಅವಳು ತನ್ನ ಶರ್ಟಿನ ಜೇಬಿನಿಂದ ಹಲವು ಕಾಗದಗಳನ್ನು ತೆಗೆದು ಆತನ ಮುಖದ ಮೇಲೆ ಎಸೆದಳು; ಎಸೆದವಳೇ ರಂಗಪ್ಪನ ಶರ್ಟನ್ನು ಬಿಟ್ಟಳು. ಕೋಪದಲ್ಲಿ ಏನು ಮಾಡುತ್ತಾಳೋ ಎಂದು ಹೆದರಿದ್ದ ಅದ್ನಾನ್ ಮತ್ತು ವೆಂಕಟ್ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆಶ್ಚರ್ಯದಿಂದ ಕಾಗದಗಳನ್ನು ಮತ್ತು ಅವಳನ್ನು ನೋಡುತ್ತ ಕುಳಿತುಕೊಂಡ ರಂಗಪ್ಪ ಒಂದು ಕಾಗದವನ್ನು ಕೈಗೆತ್ತಿಕೊಂಡ. ಅದ್ನಾನ್ ಮತ್ತು ವೆಂಕಟ್ ಕರೆಸಿದ್ದ ಡಾಕ್ಟರ್ ತಯಾರಿಸಿದ ರಿಪೋರ್ಟ್, ಅದರಲ್ಲಿ ಅವಳ ಮೇಲೆ ನಡೆದ ಅತ್ಯಾಚಾರದ ದಾಖಲೆಯಾಗಿತ್ತು. ಮತ್ತೊಂದು ಕಾಗದದಲ್ಲಿ ಅದ್ನಾನ್ ಮತ್ತು ವೆಂಕಟ್ ಖುದ್ದಾಗಿ ಬರೆದಿದ್ದ ಒಂದು ವರದಿ, ಅವಳು ಅಶೋಕ ರಸ್ತೆಯಲ್ಲಿ ತಮಗೆ ಎದುರಾದ ಪರಿಸ್ಥಿತಿಯ ಬಗ್ಗೆ. ಒಂದು ಛಾಯಾಚಿತ್ರ, ಅವಳ ಜೇಬಿನಿಂದ ದೊರೆತ ಚೀಟಿಯದ್ದು. ರಿಮೋಟ್ ಟೆಸ್ಟಿನಿಂದ ದೊರೆತ ಮಾಹಿತಿಯಿದ್ದ ಮತ್ತೊಂದು ವರದಿ, 'ಎಟರ್ನಲ್ ಇಂಕ್ಸ್' ಹೆಸರಿನ ದಾಖಲೆಯೊಂದಿಗೆ. ಎಲ್ಲವನ್ನೂ ಪರಿಶೀಲಿಸಿ ಅವರನ್ನು ನೋಡಿದ ರಂಗಪ್ಪ.

=============================================================

'ವೆಸ್ಟ್ ಲೈನ್'-ನಲ್ಲಿ ಮತ್ತೆ ವ್ಯಾಪಾರ ವಲಯಕ್ಕೆ ಹಿಂದಿರುಗುತ್ತ ತನ್ನ ಕೈಯಲ್ಲಿದ್ದ ಪಟ್ಟಿಯನ್ನು ನೋಡಿದ ವೆಂಕಟ್.
"ಒಬ್ಬನೇ ಒಬ್ಬ, ಇಲ್ಲಿಯವನು. ಬೇರೆ ಎಲ್ಲ ಬೇರೆ ದೇಶದವರೇ ಈ ಪೆನ್ನು ತೊಗೊಂಡಿರೋದು."

ರಂಗಪ್ಪ ಅವರಿಗೆ ಆ ವರ್ಷ ಪೆನ್ನು ಖರೀದಿಸಿದವರ ಮಾಹಿತಿಯ ಪಟ್ಟಿಯನ್ನು ಘಿಟ್-ಪಿಟ್ಟೆನ್ನದೇ ಒದಗಿಸಿದ್ದ. ಅದರಲ್ಲಿ ಖರೀದಿಸಿದವರ ಹೆಸರು, ದೇಶ, ಅವರಿಗೆ ಬೇಕಾದ ಪೆನ್ನುಗಳ ಮೊತ್ತ ಮತ್ತು ಅವರ ವಿಳಾಸವನ್ನು ಬರೆಯಲಾಗಿತ್ತು. ಆ ವರ್ಷ ಆ ವಜ್ರಭರಿತ ಲೇಖನಿಯನ್ನು ಕೊಂಡ ಏಕೈಕ ಭಾರತೀಯನನ್ನು ಕಾಣಲು ಅವನ ಮನೆಗೆ ಹೋಗಲು ನಿಶ್ಚಯಿಸಿದರು.

"ಆ ಫ್ಯಾಕ್ಟರೀಲಿ ಬರೀ ವಯಸ್ಸಾದವರೇ ಕೆಲಸ ಮಾಡ್ತಿದಾರೆ" ಎಂದು ಅವಳು ಹೇಳಿದಳು.
"ಹೂಂ, ನಾನೂ ಅದನ್ನ ನೋಡಿದೆ. ಸ್ವಲ್ಪ ಭಯ ಆಯ್ತು" ಎಂದ ಅದ್ನಾನ್.
"ಲಾಭ ಮಾಡ್ಕೊಳಕ್ಕೆ ಕಂಪನಿ ಹೀಗೆ ಮಾಡ್ತಿದಾರೆ. ಚೈನಾ ಕಂಪನಿಗಳು ಸಣ್ಣ ಮಕ್ಕಳ ಕೈಲಿ ಕೆಲಸ ಮಾಡಿಸಿ ಅಮೆರಿಕಾಗೆ ಬಟ್ಟೆ-ಬರೆ-ಇತ್ಯಾದಿ ಮಾರಲ್ವಾ? ಮಕ್ಕಳಿಗೆ ಕಮ್ಮಿ ಸಂಬಳ ಕೊಡಬೇಕಾಗತ್ತೆ ಅಂತ. ಹಾಗೇ ಇದೂ ಕೂಡ. ಈ ವಯಸ್ಸಾದವರಿಗೆಲ್ಲ ಬೇರೆ ಗತಿ ಇಲ್ಲ ಅಂತ ಕಾಣತ್ತೆ, ಪಾಪ. ಮಕ್ಕಳು-ಮರಿ ಎಲ್ಲ ಬಿಟ್ಟು ಹೋಗಿರ್ತಾರೆ; ಹೊಟ್ಟೆಗೆ ಏನು ಮಾಡೋದು? ಅಂಥವರನ್ನ ಹುಡುಕಿ ಇಲ್ಲಿ ಕೆಲಸಕ್ಕೆ ಹಾಕಿರ್ತಾರೆ. ಸಂಬಳ ಕಮ್ಮಿ ಕೊಟ್ಟು ಪೆನ್ನಿಗೆ ಜಾಸ್ತಿ ಬೆಲೆ ಹಾಕ್ತಾರೆ. ಒಳ್ಳೆ ಬಿಸಿನೆಸ್ ಮಾಡಲ್ಲು" ಎಂದು ವೆಂಕಟ್ ವಿವರಿಸಿದ.

ವ್ಯಾಪಾರ ವಲಯದಲ್ಲಿ ಬಂದು ಇಳಿದ ಮೂವರೂ ಪುಲಿಕೇಶಿ ರಸ್ತೆಯತ್ತ ನಡೆದರು. ಮೈಸೂರಿನ ಮೇಲೆ ದಯೆಯಿಂದಲೋ ಏನೋ, ಆ ದಿನ ಸೂರ್ಯದೇವ ಮೋಡಗಳ ಹಿಂದೆ ಅವಿತುಕೊಂಡಿದ್ದ; ತಂಗಾಳಿಯೂ ಸ್ವಲ್ಪ ಬೀಸಲಾರಂಭಿಸಿತು. ಸುಮಾರು ಹತ್ತು-ಹದಿನೈದು ನಿಮಿಷಗಳು ನಡೆದ ಮೇಲೆ ರಂಗಪ್ಪ ನೀಡಿದ ಪಟ್ಟಿಯಲ್ಲಿದ್ದ ಭಾರತೀಯನ ವಿಳಾಸಕ್ಕೆ ಬಂದು ನಿಂತರು. ಆ ಮನುಷ್ಯನ ಮನೆಯ ಬೃಹದಾಕಾರವನ್ನು ಕಂಡು ಬೆರಗಾದರು; ನೋಡುತ್ತಲೇ ನಿಂತರು. ಎಲ್ಲಿಂದಲೋ ಒಂದು ಗಂಟೆ ಬಾರಿಸಿದ ಶಬ್ದ ಕೇಳಿ ಬಂತು.

ಫಿಲೋಮಿನಾ ಚರ್ಚು ಅವರ ಮುಂದೆ ರಾರಾಜಿಸುತ್ತಿತ್ತು.

ಮಂಗಳವಾರ, ಏಪ್ರಿಲ್ 5, 2011

ನೆನಪುಗಳ ಮಾತು ಮಧುರ -- ೫

(ಕಳೆದ ಭಾಗದಲ್ಲಿ: ಅಶೋಕ ರಸ್ತೆಯಲ್ಲಿ ಸಿಕ್ಕ ಹೆಣ್ಣಿಗೆ ಅವಳ ಮೇಲೆ ರೇ ರಾಟ್ವೈಲರ್ ಎಂಬ ಭವಿಷ್ಯಜ್ಞ/ವಿಜ್ಞಾನಿ ಕಂಡುಹಿಡಿದ ಘೋರ ಪ್ರಯೋಗ ಮಾಡಲಾಗಿದೆ ಎಂದು ಅದ್ನಾನ್ ಮತ್ತು ವೆಂಕಟ್ ತಿಳಿಸುತ್ತಾರೆ. ತದನಂತರ ಅವಳನ್ನು ಬಲಾತ್ಕರಿಸಲಾಗಿದೆಯೆಂದೂ ವಿಷಾದದಿಂದ ಹೇಳುತ್ತಾರೆ. ಅವಳು ಅವರಿಗೆ ಸಿಕ್ಕ ಸಮಯದಲ್ಲಿ ಅವಳ ಬಳಿಯಿದ್ದ ಒಂದು ಚೀಟಿಯನ್ನು ಅವಳಿಗೆ ತೋರಿಸುತ್ತಾರೆ. ಅದರ ಮೇಲೆ ದೊಡ್ಡ ಬಾಲವಿರುವ ಒಂದು ನಾಯಿಯ ಚಿತ್ರವನ್ನು ಬಿಡಿಸಲಾಗಿದೆ. ಅದರ ಅರ್ಥವೇನೆಂದು ಯಾರಿಗೂ ತಿಳಿಯದು...)

ಚೀಟಿಯನ್ನು ಯಾವ ಬೆಳಕಿನಲ್ಲಿ, ಯಾವ ದಿಶೆಯಿಂದ ನೋಡಿದರೂ ಅದರ ಅರ್ಥ-ಮಹತ್ವ-ಕರ್ತೃಗಳ ಬಗ್ಗೆ ಯಾವ ಸುಳಿವೂ ಸಿಗಲಿಲ್ಲ. ಅದನ್ನು ತಲೆಕೆಳಗೆ ಮಾಡಿ ನೋಡಿದರು, ಕನ್ನಡಿಯಲ್ಲಿ ನೋಡಿದರು, ಅಲ್ಟ್ರಾ ವಯಲೆಟ್ ಬೆಳಕಿನಲ್ಲಿ ನೋಡಿದರು -- ತನ್ನ ರಹಸ್ಯವನ್ನು ಬಿಟ್ಟುಕೊಡಲೊಲ್ಲದು. ಚೀಟಿಯನ್ನು ನಿರ್ವಿಕಾರವಾಗಿ, ಭಾವನಾರಹಿತವಾಗಿ ನೋಡುತ್ತಿದ್ದ ಅವಳನ್ನು ಕುರಿತು ಅದ್ನಾನ್ --

"ಇದನ್ನ ನೋಡಿದ್ರೆ ನಿಮಗೆ ಏನಾದ್ರೂ ಜ್ಞಾಪಕ ಬರತ್ತೆ ಅನ್ಕೊಂಡಿದ್ದೆ..." ಎಂದ. ವೆಂಕಟ್ ತಾನು ಕೂಡ ಹಾಗೆಯೇ ಯೋಚಿಸಿದ್ದನೆಂದು ಸೂಚಿಸಲು ತಲೆಯಾಡಿಸಿದ.

ಅವಳಿಗೆ ಆ ಚೀಟಿಯಿಂದ, ಅದರ ಮೇಲಿದ್ದ ಚಿತ್ರದಿಂದ ಏನೂ ನೆನಪಾದಂತೆ ತೋರಲಿಲ್ಲ ಅವರಿಗೆ. ನಿರಾಶರಾದ ಅವರನ್ನು ಕಂಡು ಅವಳಿಗೆ ಏನು ಹೇಳಬೇಕೆಂದು ತೋರದೆ -- 
"ಕ್ಷಮಿಸಿ, ಇದರಿಂದ ಏನೂ ಗೊತ್ತಾಗ್ತಿಲ್ಲ" ಎಂದಳು.

"ಅಯ್ಯೋ, ಕ್ಷಮೆ ಎಲ್ಲ ದೊಡ್ಡ ಮಾತು. ಏನೋ, ಇದರಿಂದ ನಿಮ್ಮ ನೆನಪು ಟ್ರಿಗರ್ ಆಗಬೋದೇನೋ ಅಂತ ಒಂದು ಸಣ್ಣ ಆಸೆ ಇತ್ತು. ಹೋಗಲಿ, ಈಗ ಮುಂದೇನು ಮಾಡೋದು ಅಂತ ನೋಡಬೇಕು."
"ನಾಯಿ ಯಾಕೆ ಬರ್ದಿದ್ದು? ಫೇಮಸ್ ನಾಯಿಗಳು ಯಾವುದಾದ್ರೂ ಇದಿಯಾ?" ವೆಂಕಟ್ ಕೇಳಿದ.
"ಇದೆ. ಲೈಕಾದಿಂದ ಹಿಡಿದು ಎಷ್ಟೊಂದು ನಾಯಿಗಳು ಫೇಮಸ್ ಆಗಿದೆ.....ಯಾಕೆ, ಮಹಾಭಾರತದಲ್ಲಿ ಧರ್ಮರಾಯನ ಹಿಂದೆ ಒಂದು ನಾಯಿ ಬಂದಿತ್ತಲ್ಲ, ಪಾಂಡವರೆಲ್ಲ ಹಿಮಾಲಯಕ್ಕೆ ಹೋಗೋವಾಗ."
"ಅದು ಯಮ. ಮಾರುವೇಷದಲ್ಲಿ ಬಂದಿದ್ದ."
"ಗೊತ್ತು. ಅದನ್ನೇ ಇಲ್ಲಿಗೆ ಅಳವಡಿಸ್ಕೋಬಾರ್ದಾ? ಇವರನ್ನ ಆ ರಸ್ತೇಲಿ ಬಿಟ್ಟು 'ನಾವು ನಿನ್ನ ಪಾಲಿಗೆ ಯಮ' ಅನ್ನೋ ಥರ ಒಂದು ಚೀಟಿ ಬರ್ದಿಟ್ಟು ಹೋಗಿರ್ಬೋದು. ವಿಸಿಟಿಂಗ್ ಕಾರ್ಡ್ ಥರ."
"ಇವರ ಪಾಲಿಗೆ ಯಮ ಆಗಿದ್ದರೆ ಪೂರ್ತಿ ಸಾಯಿಸೇಬಿಡಬೇಕಿತ್ತು. ಜೀವಂತವಾಗಿ ಬಿಟ್ಟು ಈ ಥರ ಕಾರ್ಡು ಬಿಡೋದು ಯಾಕೆ? ಅದೂ ಅಲ್ಲದೆ, ಇದಕ್ಕೆ ಮುಂಚೆ ಎಷ್ಟೋ ಜನ ಕ್ರಿಮಿನಲ್-ಗಳನ್ನೆಲ್ಲ ಆ ಯಮನ ಹತ್ರ ಕಳಿಸಿದವರು ಒಂದು ಸಲಾನೂ ಈ ಥರ ಚಿತ್ರ ಬರ್ದು ಹೋಗಿಲ್ಲ; ಈ ಸಲ ಯಾಕೆ?"
"ಹಾಗಾದ್ರೆ ಅವರು ಬರ್ದಿಲ್ಲ ಅಂತ ಕಾಣತ್ತೆ. ರಾಟ್ವೈಲರ್ ಇವರ ಮೇಲೆ ಪ್ರಯೋಗ ಮಾಡಿ ಬಿಟ್ಟಿದಾನೆ. ಬೇರೆ ಯಾರೋ ಇವರನ್ನ...ಇವರ ಮೇಲೆ...."

"ಬಲಾತ್ಕಾರ ಮಾಡಿದಾರೆ" ಎಂದು ಅವಳೇ ಸೇರಿಸಿದಳು.
"ಅದೇ. ರಿಯಲಿ ಸಾರಿ, ನಿಮಗೆ ಹಾಗಾಗಿದ್ದು ತುಂಬಾ ಬೇಜಾರು ತಂದಿದೆ. ನಿಮಗೆ ಅದು ಜ್ಞಾಪಕ ಇಲ್ಲ, ಸೋ ನಿಮಗೆ ಅದರ ಪ್ರಭಾವ ಅಷ್ಟು ಗೊತ್ತಾಗ್ತಿಲ್ಲ ಅಂತ ಕಾಣತ್ತೆ. ನಿಮ್ಮ ಬ್ರೇನ್-ನಲ್ಲಿರೋ ರೆಸ್ಕ್ಯೂ ಸಿಸ್ಟಂ ವಿಕಾಸ ಆಗ್ತಾ ಆಗ್ತಾ ಈ ಘಟನೆಯ ಮಾನಸಿಕ ಪ್ರಭಾವ ಕೂಡ ನಿಮಗೆ ಗೊತ್ತಾಗಬೋದೇನೋ..."
"ಇರಬೋದೇನೋ. ನೀವೇನೋ..."
"ಹಾಂ, ಅದೇ, ಮತ್ತೆ ಯಾರೋ ಈ ಕೆಟ್ಟ ಕೆಲಸ ಮಾಡಿದಾರೆ. ಅವರೋ ಅಥವಾ ಮೂರನೆಯವರು ಯಾರೋ ನಿಮ್ಮನ್ನ ಆ ರಸ್ತೇಲಿ ಬಿಟ್ಟು ಹೋಗಿದಾರೆ. ಚೀಟಿ ಸಿಕ್ಕಿದ್ದು ನಿಮ್ಮ ಶರ್ಟಿನ ಒಂದು ಜೇಬಲ್ಲಿ."
"ಹೂಂ, ನಿಮ ತಲೆ ಮೇಲೆ...ಅದೇ...ನಾನು ಆ ದೊಣ್ಣೆಯಿಂದ ಹೊಡೆದಾದ ಮೇಲೆ ನೀವು ಕೆಳಗೆ ಬಿದ್ದಿರಿ. ಶರ್ಟಿನ ಮೇಲೆ ನೀವು ಹಾಕಿದ್ದ ಜಾಕೆಟ್ ತೆಗೆದು ಗುಂಡೇಟು, ಕತ್ತಿಯಿಂದ ಚುಚ್ಚಿದ್ದು, ಇಂಥದ್ದು ಏನೂ ಆಗಿಲ್ವಾ ಅಂತ ಒಂದು ಸಲ ನೋಡಿದ್ವಿ. ಆಗ ಜೇಬಲ್ಲಿ ಈ ಚೀಟಿಯಿದ್ದಿದ್ದು ಗೊತ್ತಾಯ್ತು. ಜೇಬಿಂದ ತೆಗೆದಾಗ ಕೈಯ್ಯಿಂದ ಜಾರಿ ಒಂದು ಸಲ ನೀರಲ್ಲಿ ಬಿತ್ತು. ಹೋಯ್ತು ಅನ್ಕೊಂಡೆ, ಆದ್ರೆ ಏನೂ ಹಾಳಾಗಿರಲಿಲ್ಲ. ಚಿತ್ರ ಹಾಗೇ ಇದೆ."

ಆ ವಿಷಯ ಹೇಳಿದ ವೆಂಕಟ್-ಅನ್ನು ಅವಳು --
"ಮಳೆ ನೀರು ಬಿದ್ದರೂ ಚಿತ್ರ ಹಾಗೇ ಇದಿಯಾ?" ಎಂದು ಕೇಳಿದಳು.
"ಹಾಗೇ ಇದೆ. ಚೂರೂ ಹಾಳಾಗಿಲ್ಲ. ಬೇರೆ ಏನಾದ್ರೂ ಬರಹ ಇದ್ದು ಅದು ಅಳಿಸಿ ಹೊಗಿರಬೋದು, ಆದ್ರೆ ಚಿತ್ರ ಮಾತ್ರ ಅಚ್ಚುಕಟ್ಟಾಗಿದೆ."
"ಅಷ್ಟು ನೀರು ಬಿದ್ದರೂ ಹೋಗಿಲ್ಲ ಅಂದ್ರೆ ಅದು ಸ್ಪೆಷಲ್ ಇಂಕ್ ಇರಬೇಕಲ್ವಾ?"
"ಇರಬೋದು. ಆಗಿದ್ದರೆ?"
"ಅದನ್ನ ಯಾರು ಮಾಡಿದ್ದು ಅಂತ ಕಂಡು ಹಿಡಿಯಕ್ಕಾಗಲ್ವಾ?"
"ಇಂಕ್ ಯಾರು ತಯಾರಿ ಮಾಡಿದ್ರೆ ಏನಂತೆ? ಚಿತ್ರದ ಅರ್ಥ ಏನು ಅಂತ ಅದರಿಂದ ಏನು ತಿಳಿಯತ್ತೆ?" -- ಸ್ವಲ್ಪ ಅಸಹನೆಯಿಂದಲೇ ಕೇಳಿದ ವೆಂಕಟ್.
"ತಡಿಯೋ, ಅವರ ಐಡಿಯಾ ಕೂಡ ಕೇಳಣ. ಹೇಳಿ, ಇಂಕ್ ವಿಶೇಷ ಅಂತಲೇ ಆದ್ರೆ ಆಮೇಲೆ ಏನು ಮಾಡೋದು?"
"ಅದನ್ನ ತಯಾರಿ ಮಾಡಿದ ಕಂಪನಿ ಯಾವುದು ಅಂತ ತಿಳಕೊಂಡು, ಆ ಇಂಕ್ ಉಪಯೋಗಿಸೋ ಪೆನ್ನುಗಳು ತುಂಬಾ ಇದಿಯಾ ಅಥವಾ ಕೆಲವೇನಾ ಅಂತ ಕಂಡು ಹಿಡಿಯೋದು. ಪೆನ್ನುಗಳು ಕೆಲವೇ ಆದ್ರೆ ಈ ಚಿತ್ರ ಬರ್ದಿದ್ದು ಯಾರು ಅಂತ ಗೊತ್ತಾಗಬೋದು."

"ಈ ಐಡಿಯಾ ತುಂಬಾ ವೀಕಾಗಿದೆ" ಎಂದು ವೆಂಕಟ್ ಗೊಣಗಿದ. "ಈಗ ಇಂಥ ವಾಟರ್-ಪ್ರೂಫ್ ಇಂಕುಗಳು ಎಷ್ಟೊಂದು ಬಂದಿವೆ. ಅದನ್ನ ಯೂಸ್ ಮಾಡೋ ಪೆನ್ನು ಸಾವಿರಾರು ಇರತ್ತೆ. ಆ ಪೆನ್ನುಗಳನ್ನ ಮೈಸೂರಲ್ಲೇ ಲಕ್ಷಾಂತರ ಜನ ತೊಗೊಂಡಿರ್ತಾರೆ. ಅದರಲ್ಲಿ ಒಬ್ಬನ್ನ ಹೇಗೆ ಕಂಡುಹಿಡಿಯೋದು?"
"ಇದೊಂದೇ ಉಪಾಯ ಅಂತ ಹೇಳ್ತಿಲ್ಲ. ಇದೂ ಯೋಚನೆ ಮಾಡೋ ಒಂದು ದಿಕ್ಕು ಅಂತ ಹೇಳಿದೆ, ಅಷ್ಟೇ."
"ವೆಂಕಟ್, ಐಡಿಯಾ ಅಂಥಾ ಏನು ವೀಕ್ ಅಲ್ಲ" ಎಂದು ಹತ್ತಿರವಿದ್ದ ಒಂದು ಕಂಪ್ಯೂಟರ್ ನೋಡುತ್ತಿದ್ದ ಅದ್ನಾನ್ ಹೇಳಿದ. "ಆ ಚಿತ್ರ ಅಳಿಸಿಲ್ಲ ಅಂತ ನಮಗೆ ಆಶ್ಚರ್ಯ ಆಯ್ತಲ್ಲ, ತಕ್ಷಣ ಅದರ ರಸಾಯನದ ಬಗ್ಗೆ ತಿಳ್ಕೋಬೇಕು ಅಂತ ಅನ್ಕೊಂಡೆ. ಚೀಟಿ-ನ ನಮ್ಮ ರಿಮೋಟ್ ಟೆಸ್ಟಿಂಗ್ ರೂಮಲಿಟ್ಟು ನಮ್ಮ ಹುಡುಗರಿಗೆ ಎಲ್ಲಿದಿರೋ ಅಲ್ಲಿಂದಲೇ ಇದನ್ನ ಟೆಸ್ಟ್ ಮಾಡಿ ಅಂತ ಹೇಳ್ದೆ."
"ಒಹ್, ಒಳ್ಳೇ ಕೆಲಸ ಮಾಡಿದಿಯಾ! ಏನಂದ್ರು?"

ಅವಳ ಕಡೆ ತಿರುಗಿ ಅದ್ನಾನ್ "ನಮ್ಮ ಲ್ಯಾಬ್-ಅಲ್ಲಿ ಈ ಚೀಟಿ ಇಟ್ಟರೆ, ಲೋಕದ ಎಲ್ಲೆಲ್ಲಿಂದಾದ್ರೂ ಜನ ಟೆಸ್ಟ್ ಮಾಡಬೋದು. ನಮ್ಮ ರಿಮೋಟ್ ಟೆಸ್ಟ್ ಫೆಸಿಲಿಟಿ ಆ ಥರ. ನಮಗೆ ಗೊತ್ತಾಗದೇ ಇರೋ ಎಷ್ಟೊಂದು ರೀತೀಲಿ ನಮ್ಮ ಹುಡುಗರು ಅದನ್ನ ಪರೀಕ್ಷೆ ಮಾಡಿದ್ರು. ಎಷ್ಟೇ ಆದ್ರೂ ನಾವು ಪ್ರೋಗ್ರಾಮರ್-ಗಳು, ರಸಾಯನದವರಲ್ಲ. ಈಗ ರಿಸಲ್ಟ್ ಕಳಿಸಿದಾರೆ. ನಿಮ್ಮ ಸಂಶಯ ಸರಿ ಅಂತ ಗೊತ್ತಾಗ್ತಿದೆ."
ಅದನ್ನು ಕೇಳಿ ಅವಳ ಕುತೊಹಲ ಕೆರಳಿತು. ವೆಂಕಟ್ ಕೂಡ ಹಾಗೆಯೇ ಅದ್ನಾನ್-ನನ್ನು ನೋಡುತ್ತಾ ಕುಳಿತ.
"ಈ ಚೀಟೀಲಿ ಉಪಯೋಗಿಸಿರೋ ಇಂಕ್ ಬಹಳ ವಿಶೇಷ. ಅದನ್ನ ಮಾಡೋ ಕಂಪನಿ ಎಟರ್ನಲ್ ಇಂಕ್ಸ್ ಅಂತ. ಅವರೇ ಪೆನ್ನು ಕೂಡ ತಯಾರಿ ಮಾಡ್ತಾರೆ. ವರ್ಷಕ್ಕೆ ನೂರೇ ನೂರು ಪೆನ್ನು ಮಾಡ್ತಾರೆ. ಒಂದೊಂದು ಪೆನ್ನಿಗೂ ಹುಚ್ಚು ಬೆಲೆ. ಪೆನ್ನುಗಳು ಇನ್ನು ಮೂರು ತಿಂಗಳಲ್ಲಿ ತಯಾರಿ ಆಗತ್ತೆ ಅಂತ ಕಂಪನಿ ತಿಳಿಸಿದ್ರೆ ಸಾಕು, ಆಗಲೇ ಎಲ್ಲಾ ಬುಕ್ ಆಗತ್ತೆ. ಈ ವರ್ಷ ಕೂಡ ಹಾಗೇ ಆಯ್ತು."
ಅವಳಿಗೆ ತನ್ನ ಯೋಚನೆ ಸರಿಯೆಂದು ಅದ್ನಾನ್ ಹೇಳಿದ್ದರಿಂದ ಏಕೋ ಸಂತೋಷವಾಯಿತು. ಮೆಚ್ಚುಗೆಯೆಂಬುದು ಏನೆಂದು ಅವಳಿಗೆ ತಿಳಿಯುತ್ತಿದ್ದಂತೆ ಮುಗುಳ್ನಕ್ಕಳು. ಅದನ್ನು ಕಂಡು ಅದ್ನಾನ್ ಮತ್ತು ವೆಂಕಟ್ ಕೂಡ ಪ್ರೋತ್ಸಾಹಪೂರಿತವಾಗಿ ನಕ್ಕರು.
"ಭೇಷ್! ಒಂದೇ ಸಲ ಸಿಕ್ಸರ್ ಚಚ್ಚಿದೀರ!" ವೆಂಕಟ್ ಹೊಗಳಿದ. "ಆದ್ರೆ ಒಂದು ಡೌಟು. ಪೆನ್ನು ತೊಗೊಂಡವನೇ ಈ ಚಿತ್ರ ಬರ್ದಾ ಅಂತ ಹೇಗೆ ನಿರ್ಧಾರ ಮಾಡೋದು? ಬೇರೆ ಯಾರೋ ಇಸ್ಕೊಂಡು ಬರ್ದಿರ್ಬೋದು. ಅಥವಾ ಪೆನ್ನು ಕಳ್ಳತನ ಆಗಿರಬೋದು."
"ಇಂಥಾ ಪೆನ್ನು ತೊಗೊಂಡು ಯಾರೂ ಇನ್ನೊಬ್ಬರಿಗೆ ಕೊಡಲ್ಲ ಅಂತ ಅನ್ಕೋತೀನಿ. ಪ್ರಾಣದಷ್ಟೇ ಹುಷಾರಾಗಿ ಕಾಪಾಡ್ತಾರೆ. ಬರೀ ಈ ಇಂಕ್-ಗೋಸ್ಕರ ಅಲ್ಲ. ಪೆನ್ನು ಶರೀರ ಪೂರ್ತಿ ಚಿನ್ನ, ಅಲ್ಲಲ್ಲಿ ವಜ್ರ, ಮುತ್ತು, ಹವಳ ಎಲ್ಲ."
"ಇಷ್ಟು ಅಸಹ್ಯವಾಗಿರೋ ಪೆನ್ನಲ್ಲಿ ಯಾರು ಬರೀತಾರೆ?!"
"ವೆಂಕಟ್, ನಂಗೆ ನಿಂಗೆ ಇಷ್ಟ ಆಗಲ್ಲ. ತುಂಬಾ ದುಡ್ಡಿರೋ ಜನರ ರುಚಿ ಬಗ್ಗೆ ನಮಗೇನು ಗೊತ್ತು?"

ಆಗ ಅವಳು ಕೇಳಿದಳು.
"ಎಟರ್ನಲ್ ಇಂಕ್ಸ್ ಫ್ಯಾಕ್ಟರಿ ಎಲ್ಲಿದೆ?"

ಶನಿವಾರ, ಏಪ್ರಿಲ್ 2, 2011

ನೆನಪುಗಳ ಮಾತು ಮಧುರ -- ೪

(ಕಳೆದ ಭಾಗದಲ್ಲಿ: ಅದ್ನಾನ್ ಮತ್ತು ವೆಂಕಟ್  ಅಶೋಕ ರಸ್ತೆಯಲ್ಲಿ ಅವರಿಗೆ  ಎದುರಾದ ಹೆಣ್ಣಿಗೆ ಅವಳ ಮೇಲೆ ಜರುಗಿರುವ ಒಂದು ಪ್ರಯೋಗದ ಬಗ್ಗೆ ವಿವರಿಸುತ್ತಿದ್ದಾರೆ. ತಮ್ಮ ಲ್ಯಾಬಿನಲ್ಲಿ  ಅವಳನ್ನು ಇರಿಸಿ ರೇ ರಾಟ್ವೈಲರ್ ಎಂಬ ಅಮೇರಿಕ ವಿಜ್ಞಾನಿ/ಭವಿಷ್ಯಜ್ಞನ ಪ್ರಯೋಗದ ಇತಿಹಾಸವನ್ನು ಮೆಲುಕು ಹಾಕುತ್ತಿದ್ದಾರೆ.)

"ಗೋವಿಂದನೇ ಆಗಲಿ, ಖಾವಿಂದನೇ ಆಗಲಿ, ನೀರು ಕುಡೀಲೇಬೇಕು" ಎಂದು ಹೇಳಿ, ಕತೆ ಹೇಳುತ್ತ ಗಂಟಲೊಣಗಿದ ಅದ್ನಾನ್ ಗಾಜಿನ ಸೀಸೆಯೊಂದರಿಂದ ನೀರು ಹೀರಿದ. ಅದೊಂದು ವಿಶೇಷ ಸೀಸೆಯಾಗಿತ್ತು; ತೆರೆದಾಗ ಮತ್ತು ಮುಚ್ಚಿದಾಗ ಕೋಟೆ ಬಾಗಿಲುಗಳ ಬೀಗಗಳನ್ನು ತೆರೆದು-ಹಾಕಿದಾಗ ಬರುವ ಶಬ್ದದಂತೆ ಉದ್ಭವಿಸುತ್ತಿತ್ತು.

"ಸುಮ್ಮನೆ ಪ್ರಾಸ ಇದೆ ಅಂತ ಏನೇನೋ ಹೇಳಬೇಡ! ನೀರು ಹುಷಾರಪ್ಪ, ನಾಡಿದ್ದಿನ ವರೆಗೂ ನೀರಿಲ್ಲ ಇಡೀ ಊರಲ್ಲಿ" -- ವೆಂಕಟ್ ಎಚ್ಚರಿಸಿದ. ಕಾವೇರಿಯಲ್ಲಿ ನೀರು ಆಗಾಗ್ಗೆ ಬತ್ತುವುದು. ಅದರಿಂದಾಗುವ ಅಪಾಯವನ್ನು ತಪ್ಪಿಸಲು ಮೈಸೂರು ಸರ್ಕಾರವು ನದಿಗಳ ಒಗ್ಗೂಡುವಿಕೆ ಕಾರ್ಯವನ್ನು ಕೈಗೊಂಡಿತು; ಹಾಗೆಯೇ ಅದಕ್ಕಾಗಿ ಹಣವನ್ನೂ ಕೈಗೊಂಡಿತು. ಹಣ ಮತ್ತು ಕೆಲಸ, ಎರಡೂ ಕೈಯಲ್ಲಿರಲು ಸಾಧ್ಯವಿಲ್ಲ ಎಂದು ಪರಿಗಣಿಸಿ ಹಣವನ್ನು ಮಾತ್ರ ಅಲ್ಲಿ ಇರಿಸಿಕೊಂಡಿತು. ವಾಯು ಮಾಲಿನ್ಯದ ಕಾರಣ, ಮೈಸೂರಿನಲ್ಲಿ ಬೀಳುತ್ತಿದ್ದ ಮಳೆನೀರನ್ನು ಹಾಗೆಯೇ ಕುಡಿಯುವುದು ಸಾಧ್ಯವಾಗಿರಲಿಲ್ಲ; ಕುಡಿದವರಿಗೆ ಸ್ವಾರಸ್ಯಕರ ರೋಗಗಳು  ಬರುತ್ತಿದ್ದವು. ಸರ್ಕಾರ ಮಾಡಿದ ಒಂದು ಒಳ್ಳೆಯ ಕೆಲಸವೆಂದರೆ, ಮಳೆಯಿಂದಲೋ ನದಿಯಿಂದಲೋ ಸಂಗ್ರಹಿತವಾದ ಅಲ್ಪ ಸ್ವಲ್ಪ ನೀರನ್ನು ಶುದ್ಧೀಕರಿಸಿ ಮನೆಗಳಿಗೆ ಕಳಿಸುವುದು. ಇದಕ್ಕಾಗಿ ಮೈಸೂರಿನ ನಿವಾಸಿಗಳು ವಾರ್ಷಿಕ ತೆರಿಗೆಯನ್ನು ತೆತ್ತುತ್ತಿದ್ದರು. ಆ ಶುದ್ಧ ನೀರು ವಾರಕ್ಕೆ ಒಮ್ಮೆ ಅಥವಾ ಎರಡು ದಿನಗಳು ಮಾತ್ರ ಬರುವುದು; ಮಿಕ್ಕ ದಿನಗಳು ಆ ದಿನ ಸಂಗ್ರಹಿಸಿದ ನೀರಿನಿಂದಲೇ ಸಾಗಿಸಬೇಕು. ಅದನ್ನು ಅದ್ನಾನ್ ಮತ್ತು ವೆಂಕಟ್ ವಿಶೇಷ ಬಾಟಲುಗಳಲ್ಲಿ ಕೂಡಿಡುತ್ತಿದ್ದರು; ಅವುಗಳಿಂದ ನೀರು ಹವೆಯಾಗಿ ಹೊರಗೆ ಹೋಗಲು ಅವಕಾಶವೇ ಇರಲಿಲ್ಲ.

"ರಾಟ್ವೈಲರ್ ಯಾರಿಗೂ ಕಾಣದ ಹಾಗೆ ಒಂದು ಲ್ಯಾಬ್ ಇಟ್ಕೊಂಡು ಪ್ರಯೋಗಗಳು ಮುಂದುವರಿಸಿದ. ಇದರಲ್ಲಿ ಅವನಿಗೆ ಎಫೆಮೆರಾ ಒಳಗಿಂದ ಯಾರೋ ಸಹಾಯ ಮಾಡಿರಬೇಕು. ಯಾರು ಅನ್ನೋದು ಸರಿಯಾಗಿ ಗೊತ್ತಿಲ್ಲ ನಮಗೂ. ಅವನ ಕೈಗೆ ನೀವು ಸಿಕ್ಕಿದೀರ ಯಾವಾಗಲೋ, ನಿಮ್ಮ ಮೇಲೆ ಅವನ ಬ್ರೇನ್ ಇಂಟರ್ಫೇಸ್ ಪ್ರಯೋಗ ಯಶಸ್ವಿಯಾಗಿದೆ....ಒಂದು ಮಟ್ಟಿಗೆ."

ವೆಂಕಟ್ ಗಂಭೀರ ಮುಖ ತಾಳಿದ.
"ಮೆದುಳನ್ನ ಕಂಪ್ಯೂಟರ್-ಗೆ ತರೋದೇನೋ ಸರಿಯಾಗೇ ಆಯ್ತು. ಆದ್ರೆ ವಾಪಸ್ ಮೆದುಳಿಗೆ ಆ ಮಾಹಿತಿ ಎಲ್ಲ ಹಾಕೋವಾಗ...ಏನೋ ಸರಿ ಹೋಗಿಲ್ಲ ಅಂತ ಕಾಣತ್ತೆ. ನಿಮ್ಮನ್ನ ಇಲ್ಲಿಗೆ ತಂದು ಪರೀಕ್ಷೆ ಮಾಡಿದಾಗ ನಮಗೆ ಹೀಗಾಗಿರಬೋದು ಅಂತ ಗೊತ್ತಾಯ್ತು."
"ಆ ಪ್ರಯೋಗ ವಿಫಲ ಆಗಿದೆ ಅನ್ನೋದನ್ನ ಮುಚ್ಚಿಡಕ್ಕೆ ಪ್ರಯತ್ನ ಪಟ್ಟಿದಾರೆ. ನಿಮ್ಮ ಮೆದುಳನ್ನ ಅನಲೈಸ್ ಮಾಡಿದಾಗ ಇದು ಗೊತ್ತಾಗ್ತಿದೆ. ಸಾಕಷ್ಟು ಚನ್ನಾಗಿ ಮುಚ್ಚಿಟ್ಟಿದಾರೆ, ಆದ್ರೆ ಅದನ್ನೆಲ್ಲ ಮೀರಿ ನಾವು ಕಂಡುಹಿಡಿದಿದೀವಿ" ಎಂದು ಸ್ವಲ್ಪ ಹೆಮ್ಮೆಯಿಂದಲೇ ಹೇಳಿದ ಅದ್ನಾನ್.
"ಹೂಂ, ಅಪ್ಲೋಡ್ ಫೇಲ್ಯೂರ್ ಆಗಿರೋ ಕೆಲವು ಸೂಕ್ಷ್ಮ ಸಂಕೇತಗಳು ಸಿಕ್ಕಿವೆ. ಅದು ಗೊತ್ತಾದಾಗ, ನಿಮ್ಮ ಮೆದುಳಲ್ಲಿ ಒಂದು 'ರೆಸ್ಕ್ಯೂ ಸಿಸ್ಟಂ' ಹಾಕಿದ್ವಿ. ನಿಮ್ಮ ವಯಸ್ಸು ಊಹಿಸಿ, ಆ ವಯಸ್ಸಿನ ಮಾನವ ಹೆಣ್ಣಿಗೆ ಎಷ್ಟು ಬುಧ್ಧಿ ವಿಕಾಸ ಇರಬೇಕೋ ಅಷ್ಟು ಹಾಕಿದೀವಿ."

ಅವಳು ಮೊತ್ತ ಮೊದಲ ಬಾರಿ ಮಾತಾಡಿದಳು.
"ನಿಮಗೆ ಅದು ಮಾಡಕ್ಕೆ ಹೇಗೆ ಗೊತ್ತಾಯ್ತು?"

ಅವಳ ಧ್ವನಿ ಕೇಳಿ ಅವರಿಬ್ಬರಿಗೂ ಆಶ್ಚರ್ಯ-ಆನಂದಗಳೆರಡೂ ಆದವು. ಸ್ವಲ್ಪ ನಗುತ್ತ ವೆಂಕಟ್ ಉತ್ತರಿಸಿದ.
"ಫ್ರೀಲಾಂಸ್ ಪ್ರೋಗ್ರಾಮರ್ ಅಂದ್ರೆ ಅಲ್ಲಿ ಇಲ್ಲಿ ಏನಾಗ್ತಿದೆ ಅನ್ನೋದನ್ನ ಹೇಗಾದ್ರೂ ತಿಳ್ಕೋಬೇಕಾಗತ್ತೆ."
"ಎಫೆಮೆರಾ-ನಲ್ಲಿ ನಮಗೆ ಒಬ್ಬ ಗೊತ್ತು. ಈ ವಿಷಯ ನಮಗೆ ಲೀಕ್ ಮಾಡಿದವನೇ ಅವನು."
"ಅಪ್ಲೋಡ್ ಆಗಲಿಲ್ಲ. ಆಗ ಯಾಕೋ ಏನೋ, ನಿಮ್ಮ ಮೆದುಳಲ್ಲಿ ಒಂದು ನಾಯಿಯ ರೆಸ್ಕ್ಯೂ ಸಿಸ್ಟಂ ಹಾಕಿದಾರೆ."
"ಇದು ನಿಮ್ಮ ಮೇಲೆ ಪ್ರತೀಕಾರಕ್ಕೂ ಇರಬೋದು. ನೀವು ಅವರಿಗೆ ಮೊದಲೇ ಗೊತ್ತಿದ್ದು, ಅವರಿಗೆ ಯಾವುದೋ ವಿಷಯದಲ್ಲಿ ಎದುರು ನಿಂತಿದ್ದು, ಅದಕ್ಕೆ ಸೇಡು ತೀರಿಸಿಕೋಬೇಕು ಅಂತ ನಿಮ್ಮನ್ನ ಈ ಪ್ರಯೋಗದಲ್ಲಿ ಬಲಿಪಶು ಮಾಡಿರಬೋದು."
"ನಿಮ್ಮ ಮೇಲೆ ಪ್ರಯೋಗದಿಂದ ರಾಟ್ವೈಲರ್-ಗೆ ಸ್ಫೂರ್ತಿ ಬರೋದೇನೋ ಖಂಡಿತ. ನೀವು ಬದುಕೇ ಇದೀರ, ಅದು ದೊಡ್ಡ ವಿಷಯ."
"ಇಷ್ಟು ಪೀಠಿಕೆ ಆದಮೇಲೆ ಸಾರಾಂಶ ಹೇಳ್ತೀನಿ: ರೇ ರಾಟ್ವೈಲರ್ ಕಂಡು ಹಿಡಿದ ಮಾನವ ಮೆದುಳು ಸಂಪರ್ಕ ಪ್ರಯೋಗದಿಂದ ಸಜೀವವಾಗಿ ಹೊರಬಿದ್ದ ಮೊದಲ ಮಾನವ ಪ್ರತಿನಿಧಿ ನೀವು. ಆ ಪ್ರಯೋಗ ಸಂಪೂರ್ಣ ಯಶಸ್ವಿಯಲ್ಲ, ಸಂಪೂರ್ಣ ವಿಫಲವೂ ಅಲ್ಲ. ನಿಮ್ಮ ಕೇಸಿನಿಂದ ಪಾಠ ಕಲಿತು ಅವನು ಈಗ ಆ ಪ್ರಯೋಗ ಇನ್ನೂ ಯಶಸ್ವಿಯಾಗಿಸಕ್ಕೆ ರಿಪೇರಿಗಳು ಮಾಡಿರ್ತಾನೆ."
"ಆದ್ರೆ ಒಂದು ವಿಷಯ ಹೇಳಬೇಕು ನಿಮಗೆ..."

ವೆಂಕಟ್ ಆ ಮಾತು ಹೇಳಿದ ರೀತಿ ಕೇಳಿ ಅವನ ಕಡೆ ತಿರುಗಿದಳು. ಅವಳ ನೇರ, ನಿಶ್ಚಲ ನೋಟವನ್ನು ನೋಡಲಾಗದೆ ಅವನು ಅದ್ನಾನನ ಕಡೆ ತಿರುಗಿದ. ಅದ್ನಾನ್ "ನನ್ನ ಕೈಯಲ್ಲಿ ಸಾಧ್ಯವಿಲ್ಲ, ನೀನೇ ಹೇಳು" ಎಂಬಂತೆ ತಲೆಯಾಡಿಸಿದ. ವೆಂಕಟ್ ನಿಟ್ಟುಸಿರಿಟ್ಟು ಮುಂದುವರಿಸಿದ.
"ನಿಮ್ಮನ್ನ ಇಲ್ಲಿಗೆ ತಂದ ಮೇಲೆ ನಮಗೆ ತಿಳಿದ ಒಬ್ಬ ಡಾಕ್ಟರ್ ನಿಮ್ಮನ್ನ ಪರೀಕ್ಷೆ ಮಾಡಿದಳು. ಅವಳ ರಿಪೋರ್ಟ್ ಪ್ರಕಾರ ನಿಮ್ಮ ಮೇಲೆ ಬಲಾತ್ಕಾರ ಪ್ರಯತ್ನ ಆಗಿದೆ...ಪ್ರಯತ್ನ ಏನು ಬಂತು? ಬಲಾತ್ಕಾರ ಆಗಿದೆ. ನಿಮ್ಮ ಮೆದುಳನ್ನ ಹಾಳು ಮಾಡಿ, ನಿಮ್ಮ ಮೈಯ ಮೇಲೂ ಕೈ ಮಾಡಿ ನಿಮ್ಮನ್ನ ಅಶೋಕ ರಸ್ತೇಲಿ ಹಾಕಿ ಹೋಗಿದಾರೆ, ಆ ಚಂಡಾಲರು."

ಈ ಮಾಹಿತಿಯನ್ನು ಸ್ವೀಕರಿಸಿದ ಅವಳು ಯಾವ ಪ್ರತಿಕ್ರಿಯೆಯನ್ನೂ ತೋರಲಿಲ್ಲ, ಯಾವ ಆಘಾತಕ್ಕೂ ಒಳಗಾಗಲಿಲ್ಲ. ಹಿಂದಿನ ಮೌನವನ್ನೇ ತಾಳಿ "ಆಮೇಲೆ?" ಎಂದು ಕೇಳುವಂತೆ ಅವರಿಬ್ಬರನ್ನು ನೋಡಿದಳು.
"ಈ ವಿಷಯ ಕೇಳಿ ನಿಮಗೆ ಶಾಕ್ ಆಗಿರಬೇಕು. ವೀ ಆರ್ ರಿಯಲಿ ಸಾರಿ."
"ಹೀಗೆ ಮಾಡಿದವರನ್ನ ಪತ್ತೆ ಹಚ್ಚೋದನ್ನ ನಮಗೆ ಬಿಡಿ. ಅವರಿಗೆ ಶಿಕ್ಷೆ ಆಗೇ ಆಗತ್ತೆ" ಎಂದು ವೆಂಕಟ್ ವಚನ ಕೊಡುವಂತೆ ಹೇಳಿದ.

ಯಾವುದಕ್ಕೂ ಅವಳು ಒಂದು ಮಾತೂ ಆಡಲಿಲ್ಲ. ಅಸಹನೀಯ ಮೌನ ಕವಿಯಲಾರಂಭಿಸಿತು. ಆಗ ಅದ್ನಾನ್ ಏನೋ ನೆನಪಾದಂತೆ --
"ಓಹ್, ಆ ಚೀಟಿ ಮರೆತೇ ಹೋಯ್ತಲ್ಲ!!"

--------------------------------------------

ಮೂರು ಇಂಚಿನ ಉದ್ದ-ಅಗಲ, ಅದರ ಮೇಲೆ ನೀಲಿ ಎನ್ನಬಹುದಾದ ಬಣ್ಣದಲ್ಲಿ ಬರಹ. ಯಾರು ಬರೆದದ್ದು, ಯಾರಿಗಾಗಿ ಬರೆದರು, ಏಕೆ ಬರೆದದ್ದು, ಇವಾವುದಕ್ಕೂ ಅಲ್ಲಿ ಉತ್ತರವಿರಲಿಲ್ಲ. ಆ ಸಣ್ಣ ಚೀಟಿಯನ್ನು ಹಿಂದು-ಮುಂದು ತಿರುಗಿಸಿ ನೋಡಿದಳು; ಎಲ್ಲೂ ಯಾವ ಸುಳಿವೂ ಇಲ್ಲ. ನೆರೆದಿದ್ದ ಫ್ರೀಲಾಂಸ್ ಪ್ರೋಗ್ರಾಮರ್ಗಳಿಗೂ ಅದರ ವಿಷಯ ಏನೂ ಗೊತ್ತಾಗಿರಲಿಲ್ಲ; ಅವರೂ ಅವಳಷ್ಟೇ ಸುಳುಹುಹೀನರಾಗಿದ್ದರು. ಅದರಲ್ಲಿನ ಕೈ ಬರಹವನ್ನು ನೋಡಿ ಅದನ್ನು ಅಳೆಯುವ ಪ್ರಯತ್ನ ಮಾಡುವುದು ಅಸಾಧ್ಯವಾಗಿತ್ತು.

ಏಕೆಂದರೆ ಅದರ ಮೇಲೆ ಒಂದು ನಾಯಿಯ ಚಿತ್ರವಿತ್ತು.

ಸಣ್ಣಗೆ ಬೆಳ್ಳಗಿದ್ದ ಒಂದು ನಾಯಿ. ಅದರ ಶರೀರಕ್ಕೆ ಹೊಂದಿಕೆಯಾಗದಷ್ಟು ದೊಡ್ಡ ಬಾಲ. ಆ ಚೀಟಿಯಲ್ಲಿ ಮತ್ತೇನೂ ಇರಲಿಲ್ಲ, ಇದ್ದುದೆಲ್ಲ ಆ ನಾಯಿ, ಅದರ ಬೃಹದಾಕಾರ ಬಾಲ. ಅದನ್ನು ನೋಡಿ ಅವರಿಬ್ಬರಂತೆ ಅವಳೂ ಚಕಿತಳಾದಳು.


ಶುಕ್ರವಾರ, ಮಾರ್ಚ್ 18, 2011

ನೆನಪುಗಳ ಮಾತು ಮಧುರ -- ೩

(ಕಳೆದ ಭಾಗದಲ್ಲಿ: ಅಶೋಕ ರಸ್ತೆಯಲ್ಲಿ ಬಿದ್ದಿದ್ದ ಹೆಣ್ಣನ್ನು ಅದ್ನಾನ್ ಮತ್ತು ವೆಂಕಟ್ ಎಂಬ ಪ್ರೋಗ್ರಾಮರ್-ಗಳು ಎದುರಾಗುತ್ತಾರೆ. ಅವರ ಮೇಲೆ ಅವಳು ಎಗರಿಬೀಳಲು, ಅವರು ಆ ಹಲ್ಲೆಯನ್ನು ತಪ್ಪಿಸಿ ಅವಳನ್ನು ಒಂದು ಸುರಕ್ಷಿತ ಸ್ಥಳಕ್ಕೆ ತರುತ್ತಾರೆ. ಅವಳಿಗೆ 'ಬ್ರೇನ್ ವೈಪ್' ಮಾಡಲಾಗಿದೆ ಎಂದು ತಿಳಿಸುತ್ತಾರೆ. ಆ ಕೆಲಸಕ್ಕೆ ಬೇಕಾದ ತಂತ್ರಜ್ಞಾನದ ಹಿನ್ನೆಲೆಯನ್ನು ವಿವರಿಸುತ್ತಿದ್ದಾರೆ.)

ಆಚೆ ಮಳೆ ಬೀಳುತ್ತಲೇ ಇತ್ತು. ಮಳೆಹನಿಗಳ ಸದ್ದಲ್ಲದೆ ಬೇರೇನೂ ಕೇಳದಂತೆ ಕವಿದಿದ್ದ ಅಭೇದ್ಯವೆಂಬಂತಿದ್ದ ಮೌನವನ್ನು ಆಗಾಗ್ಗೆ ಒಂದು ಪೋಲೀಸು ಗಾಡಿಯ ಸೈರನ್ ಸದ್ದು ಸೀಳುತ್ತಿತ್ತು. ಸುತ್ತಮುತ್ತಲಿದ್ದ ಕಟ್ಟಡಗಳ ನಾಮಫಲಕಗಳ ದೀಪಗಳು ಗುಪ್ತ ಸಂದೇಶವೊಂದನ್ನು ಸತತವಾಗಿ ಸಾರುವಂತೆ ಉರಿದು ಆರಿ ಮಾಡುತ್ತಿದ್ದವು. ಕಿಟಕಿಯಿಂದ ಕಾಣುತ್ತಿದ್ದ ಕಟ್ಟಡದ ಬೋರ್ಡು "ಮೈಸೂರ್ ಮೆಗಾಸಿಟಿ ಡೆವೆಲಪ್ಮೆಂಟ್ ಕಾರ್ಪೊರೇಶನ್" ಎನ್ನುತ್ತಿತ್ತು.

"ರಾಟ್ವೈಲರ್ ಮಾಡಿದ್ದು ಅಂಥಿಂಥ ಸಾಧನೆ ಅಲ್ಲ. ಎಷ್ಟೊಂದು ವರ್ಷಗಳಿಂದ ವಿಜ್ಞಾನಿಗಳು, ಕತೆಗಾರರು, ಎಲ್ಲರೂ ಬರೀ ಕನಸು ಕಾಣ್ತಿದ್ದ ವಿಷಯ ಕೊನೆಗೆ ನಿಜ ಮಾಡಿ ತೋರಿಸಿದ. ಸ್ವಾರಸ್ಯದ ವಿಷಯ ಅಂದ್ರೆ, ಅವನ ಪ್ರಯೋಗದಲ್ಲಿ ಮೊದಲು ಸಕ್ಸೆಸ್ಸಾಗಿದ್ದು ಒಂದು ಕುರಿ. ಅದೂ ಒಂದು ಕ್ಲೋನ್ ಮಾಡಿದ ಕುರಿ, ಆ ಕಾಲದ ಡಾಲಿಯ ಥರ. ಅದು ಬಿಡಿ, ಅಂತೂ ಒಂದು ಕುರಿಯ ಮೆದುಳನ್ನ ಕಂಪ್ಯೂಟರ್ಗೆ ಹಾಕಿ, ಮತ್ತೆ ಅದನ್ನ ವಾಪಸ್ ಮೇಕೆಯ ಮೆದುಳಿಗೆ ಹಾಕಿದ ನಮ್ಮ ಭವಿಷ್ಯಜ್ಞ ಉರ್ಫ್ ವಿಜ್ಞಾನಿ."

"ಎಂಥ ಅದ್ಭುತಗಳಿಗೆಲ್ಲ ಇದು ಬಾಗಿಲು ತೆಗೀತು!" ಎಂದು ವೆಂಕಟ್ ಪ್ರಾರಂಭಿಸಿದ, ಅದ್ನಾನನ ಮಾತು ಮುಗಿದಾಗ. "ಇದನ್ನೇ ಮನುಷ್ಯರಲ್ಲಿ ಮಾಡಿದ್ರೆ, ಏನೇನು ಸಾಧಿಸಬೋದಿತ್ತು! ನೋಡಿ, ಈ ಥರದ ಮಾನವ-ಯಂತ್ರ-ಸಮಾಗಮ ಮಾಡಿದ್ರೆ, ಬಹಳ ಬೇಗ ಮೆದುಳು-ಮೆದುಳು ಕನೆಕ್ಟ್ ಮಾಡೋದನ್ನ ಯಾರೋ ಒಬ್ಬರು ಕಂಡುಹಿಡಿದೇ ಹಿಡೀತಾರೆ ಅಂತ ಎಲ್ಲರಿಗೂ ಗೊತ್ತಿತ್ತು. ನಿಮಗೆ ಜ್ಞಾಪಕ ಇದಿಯೋ ಇಲ್ವೋ.."

ಅವಳು ವೆಂಕಟ್-ಅನ್ನು ನೋಡಿದಳು. 'ಜ್ಞಾಪಕ'ಗಳ ವಿಷಯ ಅವಳಿಗೆ ಅನ್ವಯಿಸುವುದಿಲ್ಲವೆಂದು ಅವನಿಗೆ ಆಗ ನೆನಪಾಯಿತು.
"ಸಾರಿ, ಹೇಳ್ತೀನಿ. ಸುಮಾರು ಮೂವತ್ತೈದು ವರ್ಷಗಳ ಹಿಂದೆ ಕೈನೆಕ್ಟ್ ಅಂತ ಒಂದು ವಿಡಿಯೋ ಗೇಮ್ ಸಾಧನ ಹೊರಳಿಸಿದ್ರು. ಅದನ್ನ ರೆಲೀಸ್ ಮಾಡಿದ ಕೆಲವೇ ವಾರಗಳಲ್ಲಿ ಅದರ ಒಳಗೆ ಏನೇನು ನಡೀತಿದೆ, ಹೇಗೆ ಕೆಲಸ ಮಾಡತ್ತೆ ಅಂತ ಒಬ್ಬ ಕಂಡು ಹಿಡಿದೇ ಬಿಟ್ಟ. ಅದಾದ ಕೆಲವೇ ದಿನಗಳಲ್ಲಿ ಅದನ್ನ ಎಂಥೆಂಥ ವಿಚಿತ್ರ ಕೆಲಸಕ್ಕೆ ಬಳಸಬೋದು ಅಂತ ಜನ ಕಂಡು ಹಿಡಿಯಕ್ಕೆ ಶುರು ಮಾಡಿದ್ರು. ಈ ಕಂಪ್ಯೂಟರ್ ಯುಗದಲ್ಲಿ ಹುಟ್ಟಿದ್ದು ಒಂದು ರೀತೀಲಿ ಒಳ್ಳೇದೇ -- ಎಲ್ಲಾದರ ಬಗ್ಗೆ ವಿವರಗಳೂ ತುಂಬಾ ಬೇಗ ಗೊತ್ತಾಗತ್ತೆ. ಎನಿವೇ, ಮೆದುಳು-ಮೆದುಳು ನೆಟ್ವರ್ಕ್ ಮಾಡೋದನ್ನ ಕಂಡುಹಿಡಿದ್ರೆ ಎಷ್ಟು ಅನುಕೂಲ, ಯೋಚನೆ ಮಾಡಿ."
"ನೀವು ಇಲ್ಲಿದ್ದು ನಾನು ಡೆಲ್ಲೀಲಿದ್ದರೆ, ಫೋನಿಲ್ಲದೆ ಕಂಪ್ಯೂಟರಿಲ್ಲದೆ ನೀವು ನನ್ನ ಡೈರೆಕ್ಟಾಗಿ ಸಂಪರ್ಕ ಮಾಡಬೋದು; ಬ್ರೇನ್ ಟು ಬ್ರೇನ್. ನೀವು ಏನಾದ್ರೂ ವಿಷಯ ಜ್ಞಾಪಕ ಇಟ್ಕೋಬೇಕು ಅಂದ್ರೆ ಗಟ್ಟು ಮಾಡೋ ಗೋಜೇ ಇಲ್ಲ, ಸೀದಾ ಮೆದುಳಿಗೆ ಅದನ್ನ ಅಪ್ಲೋಡ್ ಮಾಡ್ಕೋಬೋದು. ನಮ್ಮ ತಾತನ ಕಾಲದಲ್ಲಿ 'ದಿ ಮೇಟ್ರಿಕ್ಸ್' ಅಂತ ಒಂದು ಚಿತ್ರ ಬಂದಿತ್ತು, ಅದರಲ್ಲಿ ಹಾಗೇ ಆಗತ್ತೆ. ಈಗ ನೋಡಿದ್ರೆ ನಗು ಬರತ್ತೆ, ನಮಗೆ ಸಾಮಾನ್ಯವಾದ ಎಷ್ಟೊಂದು ವಿಷಯಗಳು ಆಗ ಕಾಲ್ಪನಿಕ ವಿಜ್ಞಾನ ಆಗಿತ್ತಾ ಅಂತ. ಅದು ಬಿಡಿ, ಕತೆ, ಕಾದಂಬರಿ, ಸಿನೆಮಾ, ಇವೆಲ್ಲಾದರಲ್ಲೂ ಪ್ರಕಾಶಕ, ಪ್ರೊಡ್ಯೂಸರ್ರು, ನಿರ್ದೇಶಕ, ಈ ಥರದ ಮಧ್ಯಸ್ಥರ ಅವಶ್ಯಕತೆನೇ ಇರಲ್ಲ -- ಅದರ ಕರ್ತೃ ಎಲ್ಲಾದನ್ನೂ ಅವನ ಮೆದುಳಲ್ಲಿ ಕಲ್ಪಿಸಿಕೋತಾನೆ, ನೀವು ಅಲ್ಲಿಗೆ ಕನೆಕ್ಟಾಗಿ ನೇರವಾಗಿ ಕಥೇಲಿ ಭಾಗವಹಿಸಬೋದು. ಕಂಪ್ಯೂಟರ್ ಇಟ್ಕೊಂಡು ವೆಬ್-ಸೈಟಿಗೆ ಹೋಗಿ ಪೇಜು ಅಥವಾ ಚಿತ್ರಗಳನ್ನ ನೋಡೋ ಹಾಗೆ. ಅವನಿಗೂ ಲಾಭ, ನಿಮಗೂ ತೊಂದ್ರೆ ಇಲ್ಲ."
"ಆದ್ರೆ ಇವೆಲ್ಲ ಮನುಷ್ಯನ ಮೆದುಳ ಜೊತೆ ಯಶಸ್ವಿಯಾಗಿ ಸಂಪರ್ಕ ಬೆಳೆಸಿದ್ರೆ ಮಾತ್ರ. ಅದಕ್ಕೆ ರಾಟ್ವೈಲರ್-ಗೆ ಮಾನವ ಪ್ರಯೋಗ ಪ್ರಾಣಿಗಳು ಬೇಕಿದ್ದವು. ಆಗ ಎಫೆಮೆರಾ ಸರ್ಕಾರಕ್ಕೆ ಕೈ ಚಾಚಿತು."

ಅವಳು ಕೆಮ್ಮಲು ಪ್ರಾರಂಭಿಸಿದಳು. ಗಂಟಲು ಮತ್ತು ನಾಲಗೆ ಒಣಗಿ ಹೋಗಿದ್ದವು. ಅತ್ತಿತ್ತ ನೋಡಿ ನೀರಿನ ಬಾಟಲೊಂದನ್ನು ಕಂಡು ಅದು ಬೇಕೆಂಬಂತೆ ಅದನ್ನೇ ನೋಡಿದಳು. ಅದನ್ನು ಕಂಡು ಅದ್ನಾನ್ ಮತ್ತು ವೆಂಕಟ್ ಬಹಳ ಸಂತೋಷ ಪಟ್ಟರು.
"ಪರವಾಗಿಲ್ಲ, ನಿಮ್ಮ ಮೆದುಳಿಗೆ ಬಾಯಾರಿಕೆಯಾದ್ರೆ ನೀರು ಕುಡೀಬೇಕು ಅಂತ ಗೊತ್ತಾಗ್ತಿದೆ. ಸೋ, ಮೂಲಭೂತವಾಗಿ ನಿಮ್ಮ ಮನುಷ್ಯ ವಿಕಾಸದ ಗುಣ ಎಲ್ಲ ಉಳಿದಿದೆ. ನಾವು ಮಾಡಿದ ರಿಪೇರಿ ಸರಿಯಾಗೇ ಆಗಿದೆ" ಎಂದು ಅದ್ನಾನ್ ತೃಪ್ತಿಯ ದನಿಯಲ್ಲಿ ಹೇಳಿದ. ವೆಂಕಟ್ ವಿವರಣೆ ಮುಂದಕ್ಕೆಳೆದ.
"ಎಫೆಮೆರಾ-ನಲ್ಲಿ ಮೇಲಿನ ತಲೆಗಳು ಸರ್ಕಾರದ ಹತ್ರ 'ಒಂದಿಷ್ಟು ಖೈದಿಗಳನ್ನ ಎರವಲು ಕೊಡಿ' ಅಂತ ಕೇಳಿದ್ರು. ಕೊಲೆಗಾರರು, ರೇಪಿಸ್ಟರು --"
"ಅದೇನೊಳ್ಳೆ ಟೈಪಿಸ್ಟರು ಅಂದ ಹಾಗೆ ಹೇಳ್ತಿಯಲ್ಲ!" ಅದ್ನಾನ್ ಅಡ್ಡ ನುಸುಳಿದ.
"ಸರಿ, ಸಿಕ್ಕಾಪಟ್ಟೆ ದರಿದ್ರ ಜನರನ್ನ ಜೈಲಲ್ಲಿಟ್ಟು ಏನು ಮಾಡ್ತೀರಾ? ವಿಜ್ನಾನಕ್ಕಾದ್ರೂ ಉಪಯೋಗ ಆಗ್ಲಿ, ಕೊಡಿ, ಅಂತ ಎಫೆಮೆರಾ ತಲೆಗಳು ಕೇಳಿದ್ರು. ತುಳುಕದೆ ಇರೋ ಕೊಡಕ್ಕಿಂತ ಜಾಸ್ತಿ ತುಂಬಿದ್ದ ಮೈಸೂರಿನ ಜೈಲುಗಳನ್ನ ಏನಾದ್ರೂ ಮಾಡಿ ಖಾಲಿ ಮಾಡಿಸಬೇಕು ಅಂತಿದ್ದ ಸರ್ಕಾರಕ್ಕೆ ಇದೇ ಒಳ್ಳೇ ಅವಕಾಶ ಅನ್ನಿಸ್ತು. ತಥಾಸ್ತು ಅಂದ್ರು. ರಾಟ್ವೈಲರ್-ಗೆ ಹಬ್ಬ; ಪರೀಕ್ಷೆ ಮಾಡಕ್ಕೆ ಮಿತಿಯಿಲ್ಲದಷ್ಟು ಬಲಿಪಶುಗಳು. ಶುಭಾರಂಭ ಅಂತ ಮಕ್ಕಳನ್ನ ಸಾಯಿಸಿದ ಒಬ್ಬನ ಜೊತೆ ಶುರು ಮಾಡಿದ."
"ಶುರು ಮಾಡಿದ್ದಷ್ಟೇ, ಆ ನನ್ನ ಮಗ ಮುಗಿದೇ ಹೋದ. ಪ್ರಯೋಗ ಫೇಲಾಯ್ತು, ಅವನ ಪ್ರಾಣ ಪಕ್ಷಿ ಹಾರಿ ಹೋಯ್ತು."
"ಆಮೇಲೆ ರೇಪಿಸ್ಟು, ಟೈಪಿಸ್ಟು, ಹೀಗೇ ಅನೇಕ ಪಾಪಿಷ್ಠರನ್ನ ಅವರ ಸಮಯಕ್ಕೆ ಮುಂಚೇನೇ ಪರಮಾತ್ಮನ ಹತ್ರ ಕಳಿಸಿದ. ಎಷ್ಟು ಪ್ರಯತ್ನ ಮಾಡಿದ್ರೂ ಮಾನವನ ಮೆದುಳ ಜೊತೆ ಮಾತ್ರ ಅವನ ಪ್ರಯೋಗ ಕ್ಲಿಕ್ಕಾಗಲಿಲ್ಲ."

ಆಚೆ, ಮಿಂಚು ಆಕಾಶವನ್ನು ಸೀಳಿ, ಭಯಂಕರವಾಗಿ ಗುಡುಗು ಮೊರೆಯಿತು.
"ಯಪ್ಪಾ! ಆ ಕಿಟಕಿ ಹಾಕಪ್ಪ ಸ್ವಲ್ಪ" ಎಂದು ಬೆಚ್ಚಿಬಿದ್ದ ಅದ್ನಾನ್ ಹೇಳಿದ. ಅವನ ಮಾತಿಗೆ ಪ್ರತಿಕ್ರಿಯಿಸಿ ಒಂದು ರೋಬಾಟ್ ತನ್ನ ಕೈಯನ್ನು ಕಿಟಕಿಯತ್ತ ಮಾಡಿತು. ಕ್ಷಣದಲ್ಲಿ ಕಿಟಕಿ ಮುಚ್ಚಿ ರೂಮು ನಿಶ್ಶಬ್ದವಾಯಿತು.
"ಇದೇ ಹೊತ್ತಲ್ಲಿ, ಒಂದಿಷ್ಟು ಮೀಡಿಯಾದವರಿಗೂ, ಹ್ಯೂಮನ್ ರೈಟ್ಸಿಗರಿಗೂ ಈ ಪ್ರಯೋಗದ ಸುಳಿವು ಹೇಗೋ ಸಿಕ್ತು. ದೊಡ್ಡ ಕೋಲಾಹಲ ಆಯ್ತು. ಭಾಗಲ್ಪುರದಲ್ಲಿ ಯಾವಾಗಲೋ ಪೊಲೀಸರು ಜೈಲಲ್ಲಿದ್ದವರ ಕಣ್ಣಲ್ಲಿ ಆಮ್ಲ ಹಾಕಿದ್ದರಂತಲ್ಲ, ಅದೇ ಥರ ಇದೂ ಕೂಡ, ಹೀಗೆಲ್ಲ ಮಾಡೋದು ಅಮಾನವೀಯ ಅಂದ್ರು."
"ಸರ್ಕಾರ ಬಿಡಲಿಲ್ಲ, ವಾದ ಮಾಡ್ತು. ಆಗ ಪೊಲೀಸರು ಕೈ ಮಾಡಿದ್ದವರ ಮೇಲೆ ಇನ್ನೂ ವಿಚಾರಣೆ ನಡೀತಿತ್ತು, ಅವರ ಮೇಲೆ ಕೈ ಮಾಡಿದ್ದು ತಪ್ಪು. ಆದ್ರೆ ಈಗ ನಾವು ಉಪಯೋಗಿಸಿದವರು ಅಸಾಧ್ಯ ದುಷ್ಟರು, ನ್ಯಾಯಾಲಯದಲ್ಲಿ ಮರಣಶಿಕ್ಷೆ ತೊಗೊಂಡು ಬಂದವರು, ಅವರ ಮೇಲೆ ಪ್ರಯೋಗ ಮಾಡೋದು ಯಾವ ಮಹಾಪಾಪ ಅಂತ ಕೇಳ್ತು."
"ಆದ್ರೂ ಹಾಗೆಲ್ಲ ಆಗಲ್ಲ, ಮಾಡಬಾರದು ಅಂತ ಕೋರ್ಟು ಕೊನೆಗೆ ಹೇಳ್ತು. ರಾಟ್ವೈಲರ್ ಲ್ಯಾಬ್ ಮುಚ್ಚಬೇಕು, ಸಂಶೋಧನೆ ನಿಲ್ಲಿಸಬೇಕು, ಅದನ್ನೆಲ್ಲ ಪೊಲೀಸರಿಗೆ ಒಪ್ಪಿಸಬೇಕು ಅಂತ ಕೋರ್ಟು ನಿರ್ಧಾರ ಕೊಡ್ತು. ಇದನ್ನೆಲ್ಲಾ ಯಾವ ಧೈರ್ಯದಲ್ಲಿ ಮಾಡಿದ್ರಿ ಅಂತ ಎಫೆಮೆರಾಗೆ ಪ್ರಶ್ನೆಗಳು ಬಂತು. ಇದು ಸಕ್ಸೆಸ್ಸಾಗಿದ್ದರೆ ಅವರನ್ನ ಎಲ್ಲರೂ ಹೊಗಳ್ತಾ ಇದ್ದರೇನೋ. ಆದ್ರೆ ಫೇಲಾದಮೇಲೆ ಎಲ್ಲರೂ ಬೈಯ್ಯೋರೇ. ಎಫೆಮೆರಾ ಸ್ಟಾಕಿನ ಬೆಲೆ ಬಿತ್ತು. ಇದರ ಬಗ್ಗೆ ಏನಾದ್ರೂ ಮಾಡಬೇಕು ಅಂತ ಅವರ ಮೇಲೆ ಒತ್ತಾಯ ಬಂತು. ಆಗ ಕೆಲವು ತಲೆಗಳು ಉರುಳಿದವು."

"ಆದ್ರೆ ರಾಟ್ವೈಲರ್ ನಿಜವಾಗಿಯೂ ತನ್ನ ಸಂಶೋಧನೆ ನಿಲ್ಲಿಸಿರಲಿಲ್ಲ."