ಶನಿವಾರ, ಮೇ 14, 2011

ನೆನಪುಗಳ ಮಾತು ಮಧುರ -- ೭

(ಕಳೆದ ಭಾಗದಲ್ಲಿ:- 'ಎಟರ್ನಲ್ ಇಂಕ್ಸ್' ಫ್ಯಾಕ್ಟರಿಯಲ್ಲಿ ರಂಗಪ್ಪನೆಂಬ ಮನುಷ್ಯನಿಂದ ದೊರೆತ ಮಾಹಿತಿಯಿಂದ, ಅಳಿಸಲಾಗದ ಇಂಕಿನ ಪೆನ್ನನ್ನು ಕೊಂಡವರ ಪೈಕಿ ಭಾರತೀಯನು ಒಬ್ಬನೇ ಒಬ್ಬ ಇದ್ದಾನೆ ಎಂದು ತಿಳಿಯುತ್ತದೆ. ಅದೇ ಮಾಹಿತಿಯ ಪಟ್ಟಿಯಲ್ಲಿ ಅವನ ವಿಳಾಸವನ್ನು ನೋಡಿಕೊಂಡು ಅದ್ನಾನ್, ವೆಂಕಟ್ ಮತ್ತು ಅವಳು ಅಲ್ಲಿಗೆ ಹೋಗುತ್ತಾರೆ. ಆ ಭಾರತೀಯನ ನಿವಾಸ ಮೈಸೂರಿನ ಹೆಮ್ಮೆಯ ಫಿಲೋಮಿನಾ ಚರ್ಚು ಎಂಬುದನ್ನು ತಿಳಿದು ಅವರಿಗೆ ಅತ್ಯಾಶ್ಚರ್ಯವಾಗುತ್ತದೆ.)

ರಿಚರ್ಡ್ ಲೂಯಿಸ್-ನ ಬಾಲ್ಯ ಸಾಧಾರಣವಾಗಿಯೇ ಇತ್ತು. ತಾಯಿ-ತಂದೆ ಇಬ್ಬರೂ ಅಧ್ಯಾಪಕರು, ಮಗನೆಂದರೆ ಅಸಾಧ್ಯ ಪ್ರೀತಿಯುಳ್ಳವರು. ಹಲವು ವರ್ಷಗಳು ಅವನ ಜೀವನದಲ್ಲಿ ಯಾವ ವಿಚಿತ್ರ ಘಟನೆಗಳೂ ಘಟಿಸಲಿಲ್ಲ. ರಿಚರ್ಡ್ ಹತ್ತು ವರ್ಷದ ಹುಡುಗನಾಗಿದ್ದಾಗ ಅದಾವುದೋ ಸಂಬಂಧಿಕರ ಮದುವೆಗೆ ಮದ್ರಾಸಿಗೆ ಹೋಗಬೇಕಾಗಿ ಬಂದಿತು. ಮದ್ರಾಸಿನ ಸೆಂಟ್ರಲ್ ಸ್ಟೇಷನ್ನಿನಿಂದ ಮದುವೆ ಮನೆಗೆ ಹೋಗಲು ಅಲ್ಲಿಯ ಲೋಕಲ್ ರೈಲೊಂದನ್ನು ಏರಿ ಹೋಗಬೇಕಿತ್ತು. ಉತ್ಸಾಹದಿಂದ ಮುಂದೆ ಓಡುತ್ತಿದ್ದ ರಿಚರ್ಡ್-ನನ್ನು ತಂದೆ-ತಾಯಿಗಳಿಬ್ಬರೂ ಹಿಡಿಯಲು ಪ್ರಯತ್ನಿಸುವಂತೆ ನಟಿಸುತ್ತಿದ್ದರು. ಈ ಆಟದಲ್ಲೇ ಮುಳುಗಿದ್ದ ಹುಡುಗ ವೇಗವಾಗಿ ಓಡಿದ; ಹಾಗೆ ಓಡುತ್ತ ಅವರು ಕೂಗಿದರೂ ಕೇಳದಷ್ಟು ದೂರ ಹೋದ. ತಿರುಗಿ ನೋಡಿದಾಗ ಅವರಿಬ್ಬರೂ ಅವನತ್ತ ಕೈಯಾಡಿಸುತ್ತಿದ್ದುದು ಕಂಡು ನಕ್ಕ. ಮತ್ತೆ ಓಡಲು ತಯಾರಾದ ಹುಡುಗನಿಗೆ "ರಿಚರ್ಡ್, ತಡಿ, ಓಡಬೇಡ" ಎಂದು ಯಾರೋ ಅಂದದ್ದು ಕೇಳಿಸಿತು. ಹತ್ತಿರದಿಂದಲೇ ಬಂದ ಧ್ವನಿ, ಅಪರಿಚಿತವಾದದ್ದು; ಆದರೂ ಆ ಮಾತಾಡಿದವರಿಗೆ ತನ್ನ ಹೆಸರು ಹೇಗೋ ತಿಳಿದಿತ್ತು. ಯಾರು ಎಂದು ನೋಡಲು ತಿರುಗಿದ; ಮರುಕ್ಷಣವೇ ಅವನ ಮುಂದೆ ಒಂದು ರೈಲು ಬಿರುಗಾಳಿಯ ವೇಗದಿಂದ ಹೋಯಿತು. ತಾನು ಮುಂದೆ ಹೋಗಿದ್ದರೆ ಇಷ್ಟು ಹೊತ್ತಿಗೆ ರೈಲಿನ ಚಕ್ರಗಳಿಗೆ ಸಿಕ್ಕು ಕಲ್ಲುಗಳ ಜೊತೆ ಬೆರೆತು ಹೋಗುತ್ತಿದ್ದ. ಗಾಬರಿಯಿಂದ ಒಂದೆರಡು ಹೆಜ್ಜೆ ಹಿಂದೆ ಹಾಕಿ ತನ್ನ ಜೀವ ಉಳಿಸಿದವರು ಯಾರು ಎಂದು ಹುಡುಕಾಡಿದ; ಯಾರೂ ಕಾಣಿಸಲಿಲ್ಲ. ದೂರದಿಂದ ಅವನ ಕಡೆಗೆ ತಂದೆ-ತಾಯಿ ಓಡಿ ಬರುತ್ತಿದ್ದರು. ಅವರು ಬಂದು ಅವನನ್ನು ಎತ್ತಿಕೊಂಡು, ಬೈದು, ಮುದ್ದಾಡಿದರೂ ರಿಚರ್ಡ್ ಮಾತ್ರ ಆ ಧ್ವನಿಯನ್ನು ಬಿಟ್ಟು ಬೇರೆ ಯೋಚನೆಯನ್ನು ಮಾಡಲೇ ಇಲ್ಲ.

ಆ ಅನುಭವ ಸಣ್ಣ ಹುಡುಗನ ಮೇಲೆ ಬಹಳ ಪ್ರಭಾವ ಬೀರಿತು. ತನ್ನನ್ನು ಕಾಪಾಡಿದ ಆ ಅಶರೀರ ವಾಣಿ ಯಾರದು? ಭೂತವೇ? ಪ್ರೇತವೇ? ಎಲ್ಲ ಬಲ್ಲ ಆ ಭಗವಂತನೇ? ತನ್ನನ್ನು ಉಳಿಸಿದ್ದಾದರೂ ಏಕೆ? ತಾನು ಯಾವುದೋ ಮಹತ್ಕಾರ್ಯಸಾಧನೆಗಾಗಿ ಹುಟ್ಟಿರಬಹುದೇ? ಚಿಕ್ಕ ವಯಸ್ಸಿನಿಂದ ಬೈಬಲ್ಲಿನಲ್ಲಿದ್ದ ಸಂತ-ಸಜ್ಜನರ ಕತೆಗಳನ್ನು ಕೇಳುತ್ತ ಬಂದ ರಿಚರ್ಡ್, ಆ ಕತೆಗಳಲ್ಲಿನ ಪವಾಡಗಳ ಬಗ್ಗೆ ಆಶ್ಚರ್ಯಗೊಂಡಿದ್ದ. ಯೇಸು ಕುರುಡರಿಗೆ ಕಣ್ಣು ಕೊಟ್ಟಿದ್ದು, ಕುಷ್ಠ ರೋಗಿಗಳನ್ನು ಗುಣಪಡಿಸಿದ್ದು, ಸತ್ತವನನ್ನು ಬದುಕಿಸಿದ್ದು ಮುಂತಾದ ಪವಾಡಗಳಂತೆ ಇದೂ ಒಂದು ಪವಾಡವೇ ಸರಿ, ಆ ದೇವನೇ ತನಗೆ ನೀಡಿದ ಒಂದು ಸಂಜ್ಞೆ ಎಂದು ನಿಶ್ಚಯಿಸಿದ. ಭಕ್ತ ತಂದೆಯಿದ್ದರೂ ಸಂದೇಹಾವಾದಿಯಾದ ತನ್ನ ತಾಯಿಯ ವಿಚಾರಧಾರೆಯತ್ತಲೇ ವಾಲುತ್ತಿದ್ದ ಸಣ್ಣ ಹುಡುಗ ಇದ್ದಕ್ಕಿದ್ದಂತೆ ತಂದೆಯ ಕಡೆ ಸೇರಿದ. ಪ್ರತಿ ಭಾನುವಾರವೂ ಚರ್ಚಿಗೆ ಹೋಗಲಾರಂಭಿಸಿದ. ಎಲ್ಲರಿಗಿಂತಲೂ ಹೆಚ್ಚು ಹೊತ್ತು ಪ್ರಾರ್ಥನೆಯಲ್ಲಿ ಮಗ್ನನಾಗಿರುತ್ತಿದ್ದ. ಪಾದ್ರಿಗಳೊಡನೆ ಚರ್ಚೆ ನಡೆಸುತ್ತ, ಚರ್ಚಿನ ವಿವಿಧ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುತ್ತ, ಶಿಲುಬೆಗೇರಿಸಿದ್ದ ಯೇಸುವಿನ ಮೂರ್ತಿಯನ್ನು ಕಂಡಾಗ ಆತನನುಭವಿಸಿದ ಬಾಧೆ-ಬವಣೆಗಳನ್ನು ನೆನೆದು ಅಳುತ್ತ, ಆತನ ಸಂದೇಶವನ್ನು ಸಾರುತ್ತ, ಸಹಾಯ ಕೋರಿದವರಿಗೆ ಸಹಾಯ ಮಾಡುತ್ತ, ಕೇವಲ ಕ್ರೈಸ್ತಾನುಯಾಯಿಯಾಗದೆ ಕ್ರಿಸ್ತನಂತೆಯೇ ಆದ. ತನ್ನ ಹದಿನಾರನೆಯ ವಯಸ್ಸಿನಲ್ಲಿ, ತಂದೆ-ತಾಯಿಗಳ ಬೇಡಿಕೆ-ಬೆದರಿಕೆಗಳನ್ನು ಕಿವಿಗೆ ಹಾಕಿಕೊಳ್ಳದೆ, ಸಂಸಾರವನ್ನು ಬಿಟ್ಟು ಪಾದ್ರಿಯಾಗಬೇಕೆಂದು ನಿರ್ಧರಿಸಿ ಫಿಲೋಮಿನಾ ಚರ್ಚನ್ನು ಸೇರಿದ.

ಚರ್ಚಿಗೆ ಬರುತ್ತಿದ್ದ ತನ್ನ ಪೋಷಕರನ್ನು ಕಂಡು ರಿಚರ್ಡ್ ಲೂಯಿಸ್ ಸಂತೋಷ ಪಡುತ್ತಿದ್ದ. ಆದರೆ ಮನೆಗೆ ಹಿಂದಿರುಗಬೇಕೆಂಬ ಅವರ ಕೋರಿಕೆಗೆ ಓಗೊಡುತ್ತಿರಲಿಲ್ಲ. ತನ್ನನ್ನು ಉಳಿಸಿದ ಭಗವಂತ ತನ್ನ ಬದುಕಿನ ಉದ್ದೇಶವನ್ನು, ಧ್ಯೇಯವನ್ನು ತನಗೆ ವಿವರಿಸುವ ವರೆಗೆ ಮನೆಗೆ ಹಿಂದಿರುಗುವುದಿಲ್ಲವೆಂದ. "ಅಷ್ಟು ವಿಶೇಷವೇ ನೀನು? ನಿನ್ನೊಬ್ಬನ ಬದುಕಿಗೆ ಮಾತ್ರ ಧ್ಯೇಯ ಇರಬೇಕಾ? ಭಗವಂತ ನಿನ್ನನ್ನ ಮಾತ್ರ ಕರೆದು ಅದನ್ನ ಹೇಳಬೇಕಾ? ಭಗವಂತನಿಗೆ ಬೇರೆ ಕೆಲಸ ಇಲ್ವಾ, ಮನುಷ್ಯರ ಜೀವನದಲ್ಲಿ ನುಸುಳಿಕೊಳ್ಳೋದು ಬಿಟ್ಟು?" ಎಂದು ಆತನ ತಾಯಿ ಪ್ರಶ್ನಿಸಿದಾಗ ರಿಚರ್ಡ್ ನಕ್ಕು ಸುಮ್ಮನಾದ. 'ತನ್ನನ್ನು ರೈಲಿನಡಿಯೇ ಸಾಯಲು ಬಿಡಬಹುದಾಗಿತ್ತಾದರೂ ಆ ಧ್ವನಿ ತನ್ನನ್ನು ತಡೆದಿತ್ತು, ಆದ್ದರಿಂದ ತನ್ನ ಜೀವನಕ್ಕೆ ಏನೋ ಅರ್ಥವಿದೆ. ಈ ಸಂದೆಹಾವಾದಿಗಳಿಗೆ ಅದು ಅರ್ಥವಾಗುವುದಿಲ್ಲ' ಎಂದುಕೊಂಡ. ಮಗನಿಂದ ದೂರವಿರುವ ತಂದೆ-ತಾಯಿಯ ನೋವು ಅರ್ಥ ಮಾಡಿಕೋ ಎಂದು ಅವರು ಹೇಳಿದರೆ 'ಒಂದಲ್ಲ ಒಂದು ದಿನ ಎಲ್ಲರೂ ಎಲ್ಲರಿಂದಲೂ ದೂರವಾಗಲೇ ಬೇಕು. ಭಗವಂತನ ಕೃಪೆಯೊಂದೇ ಶಾಶ್ವತ' ಎಂದು ಹೇಳಿ ಅವರ ಯಾವ ಬೇಡಿಕೆಗೂ, ವಿನಂತಿಗೂ, ಬೆದರಿಕೆಗೂ ಅಂಜದೆ ಪಾದ್ರಿಯಾಗಿಯೇ ಉಳಿದುಕೊಂಡ. ಹಾಗೆಯೇ ಹಲವು ವರ್ಷಗಳು ಸಾಗಿದವು.

ಕ್ರಮೇಣ, ಎಷ್ಟೋ ಮನುಷ್ಯರಂತೆ ರಿಚರ್ಡ್-ನಿಗೂ ಐವತ್ತು ವರ್ಷಗಳು ತುಂಬಿದವು. ಹೊರಗಿನ ಪ್ರಪಂಚ ಎಷ್ಟು ಬದಲಾವಣೆಗಳು ಕಂಡರೂ ಫಿಲೋಮಿನಾ ಚರ್ಚು ಮಾತ್ರ ಹಾಗೇ ಉಳಿದಿತ್ತು. ರಿಚರ್ಡ್-ನಿಗೆ ಚರ್ಚಿನ ಆ ಸ್ಥಿರತೆ, ಬದಲಾಗದ ಗುಣ ಬಹಳ ಶಾಂತಿದಾಯಕವಾಗಿತ್ತು. ಹೊರಗೆ, ನೆಲದಡಿಯಿಂದ ಉದ್ಭವಿಸಿ ಆಗಸದವರೆಗೂ ಮೈ ಚಾಚುವ ಗಾಜು-ಕಬ್ಬಿಣಗಳ ಕೋಟೆಗಳು ಎಷ್ಟೇ ಹುಟ್ಟಿಕೊಂಡರೂ, ಸುಮಾರು ಒಂದು ಶತಮಾನ ಹಳೆಯ ಆ ಚರ್ಚಿನೊಳಗೆ ಅದಾವುದರ ಪರಿವೆಯೂ ಅವನಿಗೆ ಅಷ್ಟು ಇರಲಿಲ್ಲ. ಆ ಭಗವದಾಲಯದ ಒಳಗೇ ಎಲ್ಲ ಸಂತೋಷವನ್ನೂ ಕಂಡುಕೊಂಡ. ಆಗಾಗ್ಗೆ ಬಂದು ಹೋಗುತ್ತಿದ್ದ ವ್ಯಕ್ತಿಗಳು ಅವನಿಗೆ ಚಿರ ಪರಿಚಿತರಾದರು. ಅವರೇ ಅವನಿಗೆ ಬಂಧು-ಬಳಗವಾದರು.

ಹಾಗಿರುವಾಗ, ಆ ಸಾಯಂಕಾಲ ತನ್ನ ಬಳಗದಲ್ಲಿ ಒಂದಿಬ್ಬರು ಆಡಿದ ರೀತಿ ಅವನಿಗೆ ಬಹಳ ವಿಚಿತ್ರವೆನಿಸಿತು. ಆರು ಗಂಟೆಯ ಹೊತ್ತಿಗೆ, ಕತ್ತಲಾವರಿಸುವ ಮುನ್ನ, ಚರ್ಚಿನ ಹೊರಗಿನ ಬಾಗಿಲುಗಳ ದೀಪಗಳನ್ನು ಹೊತ್ತಿಸುವುದು ರಿಚರ್ಡ್-ನ ವಾಡಿಕೆ. ಅದನ್ನು ತಾನೇ ಮಾಡುತ್ತಿದ್ದ. ಆ ಸಮಯಕ್ಕೆ ಪರಿಚಿತರು ಹಲವರು ಬಂದು ಮಾತನಾಡಿಸುತ್ತಿದ್ದರು (ಪರಧರ್ಮ ಅನುಯಾಯಿಗಳೂ ಕೂಡ); ಇಂದೂ ಹಾಗೇ ಆಗಿತ್ತು. ಹಿಂದೂ-ಮುಸಲ್ಮಾನರಿಬ್ಬರು ಬಂದು ತನ್ನನ್ನು ಚನ್ನಾಗಿಯೇ ಮಾತನಾಡಿಸುತ್ತಿದ್ದರು. ಮೈಸೂರಿನ ಬೆಳವಣಿಗೆ, ವ್ಯಾಪಾರ ವಲಯ ಹೇಗೆ ಚರ್ಚಿನ ಬಾಗಿಲ ವರೆಗೂ ವ್ಯಾಪಿಸಿತ್ತು, ಮಾನವನ ಬದುಕಿನ ಅರ್ಥ/ಅರ್ಥ ಹೀನತೆ, ಮುಂತಾದ ವಿಷಯಗಳ ಮಾತಾಗುತ್ತಿತ್ತು. ಇದ್ದಕ್ಕಿದ್ದ ಹಾಗೆ ತನ್ನ ಹಿಂದಿನಿಂದ ಯಾರೋ ಬಂದು ತಲೆಗೂದಲೊಂದನ್ನು ಜೋರಾಗಿ ಎಳೆದು ಕಿತ್ತರು. ಆಶ್ಚರ್ಯ, ನೋವುಗಳಿಂದ ರಿಚರ್ಡ್ ಚೀರಿದ; ಆದರೆ ತನ್ನ ಜೊತೆ ಮಾತನಾಡುತ್ತಿದ್ದ ಇಬ್ಬರೂ ತನಗೆ ಯಾವ ಸಹಾಯವೂ ಮಾಡದೆ ಕೂದಲು ಕಿತ್ತವರ ಕಡೆಯೇ ನೋಡುತ್ತ ನಿಂತಿದ್ದರು. ಯಾರೆಂದು ರಿಚರ್ಡ್ ತಿರುಗಿ ನೋಡುವಷ್ಟರಲ್ಲಿ ಅಲ್ಲಿ ಯಾರೂ ಇರಲೇ ಇಲ್ಲ. ತಲೆಯುಜ್ಜಿಕೊಳ್ಳುತ್ತ  ಆ ಇಬ್ಬರನ್ನೇ ಈಗ ನಡೆದದ್ದೇನು ಎಂದು ಕೇಳೋಣವೆಂದಾಗ ಅವರಿಬ್ಬರೂ ಅವನಿಗೆ ಅವಸರವಾಗಿ ವಿದಾಯ ಹೇಳಿ ಹೊರಟರು. 'ಇದಕ್ಕೇನು ಅರ್ಥ? ಭಗವಂತ, ನನ್ನ ಬದುಕಿನ ಅರ್ಥ ಏನು ಅಂತ ಇನ್ನೂ ಹೇಳಿಲ್ಲ. ಹೋಗಲಿ, ಇದರ ಅರ್ಥವಾದರೂ ಹೇಳಪ್ಪ' ಎಂದು ಮನಸ್ಸಿನಲ್ಲೇ ಕೇಳಿಕೊಂಡ.

***************************************************************************

'ಢಣ್!!' ಎಂದು ಸತತವಾಗಿ ಹತ್ತು ಸಲ ಹೊಡೆದುಕೊಂಡು ಚರ್ಚಿನ ಮೇಲಿದ್ದ ಗಂಟೆ ರಾತ್ರಿಯ ಸಮಯ ಸೂಚಿಸಿತು. ಯೇಸುವಿನ ಮೂರ್ತಿಯ ಸಮೀಪದಲ್ಲೇ ಇದ್ದ ಒಂದು ಕೋಣೆಯಲ್ಲಿ ಕುಳಿತು ಸಂತ ಆಗಸ್ಟೀನನ "ಕನ್ಫೆಶನ್ಸ್" ಓದುತ್ತಿದ್ದ ಫಾದರ್ ರಿಚರ್ಡ್ ಮಲಗುವ ನಿರ್ಧಾರ ಮಾಡಿ ಮೇಜಿನ ಮೇಲಿದ್ದ ದೀಪವನ್ನು ಆರಿಸಲು ಕೈ ಚಾಚಿದ. ಆಗ ಚರ್ಚಿನ ಮುಖ್ಯ ಬಾಗಿಲನ್ನು ಯಾರೋ ತಟ್ಟಿದ ಶಬ್ದವಾಯಿತು. ಈ ಕಗ್ಗತ್ತಲೆಯ ವೇಳೆಯಲ್ಲಿ ಯಾರಿರಬಹುದು ಎಂದು ಯೋಚಿಸುತ್ತ, ಬಹುಷಃ ಭ್ರಮೆಯಿರಬಹುದೇನೋ ಎಂದು ದೀಪ ಆರಿಸಿ ಅಲ್ಲೇ ಇದ್ದ ಸಣ್ಣ ಮಂಚದ ಮೇಲೆ ಮಲಗಿದ. ಮರುಕ್ಷಣವೇ ಮತ್ತೆ ಬಾಗಿಲು ತಟ್ಟಿದ ಶಬ್ದ. ಸ್ವಲ್ಪ ಅಸಹನೆಯಿಂದಲೇ ಎದ್ದು ರಿಚರ್ಡ್ ಬಾಗಿಲಿನತ್ತ ನಡೆದು "ಯಾರು?" ಎಂದು ಕೇಳಿದ. "ಫಾದರ್, ನಾನು ಕನ್ಫೆಸ್ ಮಾಡ್ಕೋಬೇಕು. ದೊಡ್ಡ ತಪ್ಪು ಮಾಡಿದಿನಿ, ದಯವಿಟ್ಟು ನನ್ನ ಮಾತು ಕೇಳಿ" ಎಂದಿತು ಒಂದು ಧ್ವನಿ. ಭಯ ಮಿಶ್ರಿತವಾದ ಸ್ತ್ರೀ ಕಂಠ. "ಹಾಳುಬಿದ್ದ ಈ ಹೊತ್ತಿನಲ್ಲಿ ನಿನ್ನದೆಂಥ ತಪ್ಪೊಪ್ಪಿಗೆ? ನನ್ನ ಈಗ ಎಬ್ಬಿಸಿದ್ದೇ ದೊಡ್ಡ ತಪ್ಪು, ಅದನ್ನ ಕ್ಷಮಿಸಿದೀನಿ. ಹೋಗತ್ಲಾಗೆ!" ಎಂದು ಇತರ ಪಾದ್ರಿಗಳು ಬಹುಶಃ ಬೈದು ಕಳಿಸುತ್ತಿದ್ದರೇನೋ; ಆದರೆ ಕುತೂಹಲ ಕೆರಳಿದ ರಿಚರ್ಡ್-ನಿಗೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಬಾಗಿಲಿಗೆ ಹಾಕಿದ್ದ ದೊಡ್ಡ ಅಗಣಿಯನ್ನು ತೆಗೆದ.

ಕಪ್ಪು. ಮೇಲಿಂದ ಕೆಳಗಿನ ವರೆಗೂ ಕಪ್ಪು. ಬಟ್ಟೆ, ಪಾದರಕ್ಷೆಗಳಷ್ಟೇ ಅಲ್ಲ, ಕೈಯಲ್ಲಿದ್ದ ಪಿಸ್ತೂಲು ಕೂಡ. ಆ ಪಿಸ್ತೂಲು ತನ್ನ ಕಡೆಯೇ ಗುರಿಯಿಟ್ಟಿದ್ದನ್ನು ಕಂಡು ಎರಡು ಹೆಜ್ಜೆ ಹಿಮ್ಮೆಟ್ಟಿದ ರಿಚರ್ಡ್. ಅವಳು ಕೂಡ ಚರ್ಚಿನೊಳಗೆ ಬಂದು ತನ್ನ ಹಿಂದೆ ಬಾಗಿಲನ್ನು ಭದ್ರವಾಗಿ ಹಾಕಿದಳು. ಕನ್ಫೆಷನ್ ಬೂಥ್-ನತ್ತ ಅವನನ್ನು ಕರೆದೊಯ್ದು ಅದರೊಳಗೆ ಹೋಗಲು ಸೂಚಿಸಿದಳು. ಆದರೆ ಸಾಮಾನ್ಯವಾಗಿ ಪಾದ್ರಿ ಕೂರುವ ಸ್ಥಳದಲ್ಲಲ್ಲ, ತಪ್ಪೊಪ್ಪಿಕೊಳ್ಳುವ ಭಕ್ತರು ಕೂರುವ ಕಡೆ ಕೂರುವಂತೆ ಕೈ ಮಾಡಿದಳು. ಪಾದ್ರಿಯ ಸ್ಥಳದಲ್ಲಿ ತಾನು ಕುಳಿತು ಅವನನ್ನೇ ನೋಡಿದಳು. ಇಬ್ಬರ ನಡುವೆ ಪರದೆ ಇದ್ದರೂ ತನ್ನ ಕಡೆ ಗುರಿಯಿಟ್ಟಿದ್ದ ಪಿಸ್ತೂಲು ರಿಚರ್ಡ್-ನಿಗೆ ಕಾಣುತ್ತಿತ್ತು. ಒಂದೆರಡು ಕ್ಷಣ ಯಾರೂ ಮಾತಾಡಲಿಲ್ಲ.

"ಹೇಳಿ, ಫಾದರ್, ನಿಮ್ಮ ತಪ್ಪೆಲ್ಲ ಒಪ್ಕೋತೀರಾ?"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ